ಉದಯವಾಹಿನಿ, ರಾಮದುರ್ಗ: ಬಸವತತ್ವ ಒಪ್ಪಿರುವ ಎಲ್ಲರೂ ಲಿಂಗಾಯತರಾಗಿದ್ದು, ದೇಶ ವಿದೇಶಗಳು ಬಸವಮಯವಾದರೆ ಭಾರತ ವಿಶ್ವಗುರುವಾದಂತೆ ಎಂದು ಶರಣ ಸಾಹಿತಿ, ಪ್ರೋ. ಸಿದ್ಧಣ್ಣ ಲಂಗೋಟಿ ಹೇಳಿದರು.
ಪಟ್ಟಣ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಲಿಂಗಾಯತ ದರ್ಶನ ವಚನಾನುಭವ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಉದಯವಾಗಿರುವ 5 ಧರ್ಮಗಳಲ್ಲಿ ಒಂದು ಅದು ಕರ್ನಾಟಕದಲ್ಲಿ ಉಗಮವಾಗಿರುವ ಲಿಂಗಾಯತ ಧರ್ಮ ಬಲಿಷ್ಠವಾಗಲು ಲಿಂಗಾಯತರೆಲ್ಲ ಒಗ್ಗಾಟ್ಟಾಗಿರಬೇಕು ಎಂದು ಹೇಳಿದರು.
ಲಿಂಗಾಯತ ಧರ್ಮ ಕನ್ನಡದ ಧರ್ಮವಾಗಿದೆ ಪ್ರತಿಯೊಬ್ಬರಿಗೆ ತಿಳಿಯುವ ಭಾಷೆ ಕನ್ನಡದಲ್ಲಿ ವಚನ ಸಾಹಿತ್ಯ ಇದ್ದು ಪ್ರತಿ ಮನೆ ಮನೆಗೆ ಮುಟ್ಟಿಸುವ ಕಾರ್ಯ ನಡೆಯಬೇಕಾಗಿದೆ ಪ್ರತಿಯೊಬ್ಬರು ವಿಶ್ವಗುರು ಬಸವಣ್ಣನವರು ತಿಳಿಸಿದ ಮಾರ್ಗದಲ್ಲಿ ನಡೆಯಬೇಕು ಪ್ರತಿಯೊಬ್ಬರು ಬಸವ ಧರ್ಮವನ್ನು ಪಾಲಿಸಬೇಕು ವಿನಃ ಮತ್ತೊಬ್ಬರನ್ನು ನಿಂಧಿಸುವ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದರು.
