ಉದಯವಾಹಿನಿ, ಯಾದಗಿರಿ: ಓಮಿನಿ ವಾಹನಗಳ ಟಾಪ್‌ ಮೇಲೆ ಗುಡ್ಡೆಗಟ್ಟಿಲೇ ಬ್ಯಾಗುಗಳು, ಒಬ್ಬರ ಮೇಲೆ ಒಬ್ಬರು ಕುಳಿತುಕೊಳ್ಳುವ ಮಕ್ಕಳು, ಆಟೊದಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳ ಸಂಚಾರ, ಮಿನಿಬಸ್‌ಗಳ ತುಂಬೆಲ್ಲ ನಿಂತು ಮಕ್ಕಳು ಶಾಲೆ ಹಾಗೂ ಮರಳಿ ಮನೆಗೆ ಬರಬೇಕಾದ ಸ್ಥಿತಿ…
ನಗರವೂ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳ ವಾಹನಗಳು ಮಕ್ಕಳನ್ನು ಕರೆತರುವ ದೃಶ್ಯಗಳಿಗೆ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕರೆ ತರುವ ವಾಹನಗಳಿಗೆ ಸರಿಯಾದ ದಾಖಲೆಗಳು ಇರುವುದಿಲ್ಲ. ಅದರಲ್ಲಿ ಟಂಟಂನಲ್ಲಿ ಹೆಚ್ಚಿನ ಮಕ್ಕಳನ್ನು ಕೂಡಿಸಿಕೊಂಡು ಶಾಲೆಗೆ ಕರೆ ತರುವುದು ಸಾಮಾನ್ಯವಾಗಿದೆ.

ವ್ಯಾನ್‌ಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆ ತರುವುದು. ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುವುದು ಮಕ್ಕಳ ಜೀವಕ್ಕೆ ಸಂಚಕಾರ ತರುವ ಅಪಾಯವಿದೆ. ಪಾಲಕರು ವಾಹನಗಳ ಸಂಚಾರದ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಮಾತು ಪೊಲೀಸರಿಂದ ಕೇಳಿ ಬರುತ್ತಿವೆ. ಯಾವುದೇ ವಾಹನದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂಬುದು ನಿಯಮವಿದೆ. ಆದರೆ, ಇಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಾರೆ. ನಗರದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಈ ಆಟೊಗಳು ನಿಧಾನವಾಗಿ ಹೋಗುವುದಿಲ್ಲ. ಚಾಲಕರು ಯಾವಾಗಲೂ ತರಾತುರಿಯಲ್ಲೇ ಇರುತ್ತಾರೆ. ಮಕ್ಕಳಿಗೆ ತೊಂದರೆ ಆಗುವುದನ್ನು ಗಮನಿಸುವುದಿಲ್ಲ.‌

ಆಟೊದಲ್ಲಿ 10ಕ್ಕೂ ಹೆಚ್ಚು ಮಕ್ಕಳು, ಓಮ್ನಿಗಳಲ್ಲಿ 15ಕ್ಕೂ ಹೆಚ್ಚು ಮಕ್ಕಳು ಇರುತ್ತಾರೆ. ಮಕ್ಕಳು ಒಳಗಡೆ ಇದ್ದರೆ, ಅವರ ಬ್ಯಾಗ್‌ಗಳು ಹೊರಗಡೆ ನೇತು ಹಾಕಲಾಗುತ್ತದೆ. ಆಟೊಗಳಂತೂ ಒಂದು ಕಡೆಗೆ ವಾಲುತ್ತಿರುತ್ತವೆ. ಯಾವಾಗ ಏನಾಗಬಹುದು ಎಂಬ ಕಾಳಜಿ ಇಲ್ಲದೆ ಚಾಲಕರು ವಾಹನ ಚಲಾಯಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!