ಉದಯವಾಹಿನಿ, ಪಾಟ್ನಾ: ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ಶನಿವಾರ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಊಟದಲ್ಲಿ ಹಾವು ಪತ್ತೆಯಾದ ನಂತರ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಅಂದ ಹಾಗೇ ಈ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯ ಫೋರ್ಬ್ಸ್ಗಂಜ್ನ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮಧ್ಯಾಹ್ನದ ಊಟದ ಸಮಯದಲ್ಲಿ ಎನ್ಜಿಒ ಸಿದ್ಧಪಡಿಸಿದ ‘ಖಿಚಡಿ’ ಮಕ್ಕಳಿಗೆ ಬಡಿಸುತ್ತಿದ್ದಾಗ ಒಂದು ತಟ್ಟೆಯಲ್ಲಿ ಹಾವು ಕಂಡುಬಂದಿದೆ. ಶಾಲೆಯಲ್ಲಿ ಈ ಸುದ್ದಿ ಹರಡಿದ ಕೂಡಲೇ, ಆಹಾರ ವಿತರಣೆಯನ್ನು ನಿಲ್ಲಿಸಲಾಯಿತು. ಆದಾಗ್ಯೂ, ಈಗಾಗಲೇ ತಿನ್ನುತ್ತಿದ್ದ ವಿದ್ಯಾರ್ಥಿಗಳು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ತಕ್ಷಣ ಅವರನ್ನು ಫೋರ್ಬ್ಸ್ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಎಸ್ಡಿಎಂ, ಎಸ್ಡಿಒ ಮತ್ತು ಡಿಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಏತನ್ಮಧ್ಯೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಡಿಇಒ ಮಕ್ಕಳನ್ನು ಭೇಟಿ ಮಾಡಲು ಆಸ್ಪತ್ರೆಗೆ ತಲುಪಿದರು. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಮಾತನಾಡಿದರು. ಮಧ್ಯಾಹ್ನದ ಊಟದ ಗುಣಮಟ್ಟದ ಬಗ್ಗೆ ನಾವು ಎನ್ಜಿಒಗೆ ಹಲವಾರು ಬಾರಿ ದೂರು ನೀಡಿದ್ದೇವೆ, ಆದರೆ ಅವರು ಕೇಳುತ್ತಿಲ್ಲ’ ಎಂದು ಶಾಲಾ ಶಿಕ್ಷಕರು ಆರೋಪಿಸಿದ್ದಾರೆ. ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಹೇಗೆ ಕಂಡುಬಂದಿದೆ ಎಂದು ನಮಗೆ ತಿಳಿದಿಲ್ಲ’ ಎಂದು ಎನ್ಜಿಒದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
