ಉದಯವಾಹಿನಿ, ಬೆಂಗಳೂರು: ಅಯೋಡಿನ್ ಕೊರತೆಯ ಬಗ್ಗೆ ಗರ್ಭಿಣಿಯರು, ಹಾಲುಣಿಸುವ ತಾಯಂದಿರುವ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಐಟಿಸಿ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್ (ಐಜಿಡಿ) ಅವರ ವಿನೂತನ “ಆಶೀರ್ವಾದ್ ಸ್ಮಾರ್ಟ್ ಇಂಡಿಯಾ” ಕಾರ್ಯಕ್ರಮ ಹೆಚ್ಚು ಪ್ರಸ್ತುತ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ಐಟಿಸಿ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ “ಆಶಿರ್ವಾದ್ ಸ್ಮಾರ್ಟ್ ಇಂಡಿಯಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಡಿನ್ ಕೊರತೆ ಬಗ್ಗೆ ಹೆಚ್ಚು ಅರಿವಿನ ಅಗತ್ಯವಿದೆ. ಅದರಲ್ಲೂ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಮಕ್ಕಳ ಬುದ್ದಿ ಬೆಳವಣಿಗೆಗೆ ಅಯೋಡಿನ್‌ನ ಅತ್ಯವಶ್ಯಕ. ಆದರೆ, ಬಡತನದ ಹಿನ್ನೆಲೆ ಇರುವವರು ಅಯೋಡಿನ್, ಪ್ರೊಟಿನ್, ವಿಟಮಿನ್ಸ್‌ಯುಕ್ತ ಆಹಾರ ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರವು ಈಗಾಗಲೇ ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಹಕಾರದಿಂದ ವಾರದಲ್ಲಿ ಆರು ದಿನವೂ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಜೊತೆಗೆ ಮಕ್ಕಳಿಗೆ ಹಾಲು ಸಹ ನೀಡಲಾಗುತ್ತಿದೆ, ಇದರಿಂದ ಮಕ್ಕಳಿಗೆ ಬೇಕಾದ ಅಯೋಡಿನ್ ದೊರೆಯುತ್ತಿದೆ.
ಯಾವುದೇ ಜಾಗೃತಿ ಕಾರ್ಯಕ್ರಮವೇ ಆಗಲಿ ಅದು ಶಾಲೆಗಳ ಮೂಲಕ ಮಕ್ಕಳಿಂದಲೇ ಶುರುವಾಗಬೇಕು. ಮಕ್ಕಳಿಗೆ ಅಯೋಡಿನ್‌ನ ಕೊರತೆಯಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರೆ, ಅವರು ತಮ್ಮ ಕುಟುಂಬಸ್ಥರನ್ನು ಜಾಗೃತರನ್ನಾಗಿಸುತ್ತಾರೆ. ಐಟಿಸಿ ಅವರ ಈ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮ ಹೆಚ್ಚು ಪ್ರಸ್ತುತವೆಂದು ಹೇಳಿದರು.
ಕ್ರಿಮಿನಾಶಕಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಂಡಿದ್ದು, ಅದರಲ್ಲಿ ಬೆಳೆಯುವ ಬೆಳೆಯಲ್ಲೂ ಅಯೋಡಿನ್ ಸಿಗುತ್ತಿಲ್ಲ. ಕುಡಿಯುವ ನೀರಿನಲ್ಲೂ ಸಹ ಮಿನರಲ್ಸ್ ಕೊರತೆಯಾಗಿದೆ. ಈ ಎಲ್ಲದರ ಪರಿಣಾಮ ಕುಡಿಯುವ ನೀರು, ಸೇವಿಸುವ ಆಹಾರದಲ್ಲಿ ಅಯೋಡಿನ್ ಪಡೆಯಲಾಗುತ್ತಿಲ್ಲ. ಇದಕ್ಕೆ ಸಪ್ಲಿಮೆಂಟ್‌ನ ಅವಶ್ಯಕತೆ ಇದೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಕಾರದಲ್ಲಿ ಎಲ್ಲೆಡೆ ಅಯೋಡಿನ್ ಕೊರತೆ ನೀಗಿಸುವ ಕುರಿತು ಜಾಗೃತಿ ಮೂಡಿಸುವ ಹೆಜ್ಜೆ ಇಡುವುದು ಅನಿವಾರ್ಯ ಎಂದು ತಿಳಿಸಿದರು.
