ಉದಯವಾಹಿನಿ, ಬೀದರ್: ‘ಬೀದರ್-ಹುಮನಾಬಾದ್ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾಮಗಾರಿ 2019ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇದುವರೆಗೆ ಮುಗಿದಿಲ್ಲ. ಯಾರಪ್ಪನ ದುಡ್ಡು ಅದು. ತೆರಿಗೆ ಪಾವತಿದಾರರ ದುಡ್ಡು ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ?’ಹೀಗೆ ಪ್ರಶ್ನಿಸಿದವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.
ಖಂಡ್ರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಅಪಘಾತಗಳನ್ನು ತಪ್ಪಿಸಲು ಬೀದರ್-ಹುಮನಾಬಾದ್ ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ರಸ್ತೆ ಗುಣಮಟ್ಟ ಬಹಳ ಕಳಪೆಯಾಗಿದೆ. ಈ ಹಿಂದಿನ ರಸ್ತೆಯೇ ಬಹಳ ಚೆನ್ನಾಗಿತ್ತು ಎಂದರು.ಅಪಘಾತಗಳಿಂದ ಸಾಕಷ್ಟು ಜನ ಮೃತಪಡುತ್ತಿದ್ದಾರೆ. ಅದರ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ನನಗೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ ಅವರಿಗೆ ಸೂಚಿಸಿದರು.
ನಾಚಿಕೆ ಆಗುವುದಿಲ್ಲವೇ..?’: ಇದಕ್ಕೂ ಮುನ್ನ ಮಾತನಾಡಿದ ಸಂಸದ ಸಾಗರ್ ಖಂಡ್ರೆ, ‘ಬೀದರ್-ಔರಾದ್ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳಾಗುತ್ತಿವೆ. ಸಾಕಷ್ಟು ದೂರುಗಳು ಬರುತ್ತಿವೆ. ಇದಕ್ಕೆ ಕಾರಣವೇನು’ ಎಂದು ಪ್ರಶ್ನಿಸಿದರು.ಅದಕ್ಕೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಮಹೇಶ ಪಾಟೀಲ, ಬೀದರ್-ಔರಾದ್ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಟೋಲ್ ಆರಂಭವಾಗಲಿದೆ. ಮೊದಲು ಚತುಷ್ಪಥ ನಿರ್ಮಿಸಲು ನಿರ್ಧರಿಸಲಾಗಿತ್ತು. ಅದಕ್ಕೆ ಅಗತ್ಯ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ದ್ವಿಪಥ ಮಾಡಲಾಯಿತು. ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯ ಆಗುವುದಿಲ್ಲ ಎಂದರು.ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಾಗರ್ ಖಂಡ್ರೆ ಹೇಳಿದರು.
