ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯ ಹೆಜ್ಜೆ ಇಡಬೇಕು.ರಾಷ್ಟ್ರ ಮಟ್ಟದ ಜನಗಣತಿಯವರೆಗೂ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಮೀಕ್ಷಾ ವರದಿಯನ್ನು ಬಹಿರಂಗಗೊಳಿಸಬೇಕು ಮತ್ತು ಅಂಗೀಕರಿಸಬೇಕು ಎಂಬ ಒತ್ತಡಗಳು ಹೆಚ್ಚಿವೆ. ಮುಂದಿನ ಸಚಿವ ಸಂಪುಟದಲ್ಲಿ ಜಾತಿ ಜನಗಣತಿ ಎಂದೇ ಹೇಳಲಾದ ಸಮೀಕ್ಷಾ ವರದಿ ಕುರಿತು ಚರ್ಚಿಸುವ ಸನ್ನಿವೇಶಗಳು ಸೃಷ್ಟಿಯಾಗಿರುವ ಹಂತದಲ್ಲಿ ಡಿ.ಕೆ.ಸುರೇಶ್‌ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಜನಗಣತಿಯನ್ನು ಘೋಷಣೆ ಮಾಡಿದೆ. ಅದಕ್ಕೆ ಯಾವ ರೀತಿಯ ಮಾನದಂಡಗಳನ್ನು ಅಳವಡಿಸಲಾಗುತ್ತಿದೆ ಎಂದು ಕಾದು ನೋಡುತ್ತಿದ್ದೇವೆ. ಬಹುತೇಕ ಜಾತಿ ಗಣತಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅಲ್ಲಿ ಜಾತಿ ಗಣತಿ ನಡೆದರೆ ರಾಷ್ಟ್ರಮಟ್ಟದಲ್ಲೇ ದತ್ತಾಂಶಗಳು ಸಂಗ್ರಹವಾಗುತ್ತವೆ. ಎಲ್ಲಾ ಗೊಂದಲಗಳು ಬಗೆ ಹರಿಯುತ್ತವೆ.
ಜೊತೆಗೆ ರಾಷ್ಟ್ರ ಮಟ್ಟದ ಸಮೀಕ್ಷಾ ವರದಿಗೆ ಅಧಿಕೃತ ಮಾನ್ಯತೆಯೂ ದೊರೆಯಲಿದೆ. ರಾಜ್ಯ ಮಟ್ಟದಲ್ಲಿ ನಡೆದಿರುವ ಸಮೀಕ್ಷೆಗೆ ಮಾನ್ಯತೆ ಪಡೆಯಲು ಹೋರಾಟ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ರಾಷ್ಟ್ರ ಮಟ್ಟದ ಗಣತಿ ಒಂದು ವರ್ಷದಲ್ಲಿ ಮುಗಿಯುವ ಸಾಧ್ಯತೆ ಇದ್ದು ಅಲ್ಲಿಯವರೆಗೂ ಕಾದು ನೋಡುವಂತೆ ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ ನಾಯಕರು. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ನಮ ಆಸೆಯಾಗಿದೆ. ಆದಷ್ಟು ಶೀಘ್ರದಲ್ಲಿ ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಅವರು ಹೊರಬರಲಿ ಎಂದು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!