ಉದಯವಾಹಿನಿ, ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅ.6ರಿಂದ ಯುವ ದಸರಾ ಆರಂಭವಾಗಲಿದ್ದು, ವ್ಯಾಪಕ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ ಎಂದು ಯುವ ದಸರಾ ವಿಶೇಷಾಧಿಕಾರಿ ಹಾಗೂ ಎಸ್‌‍.ಪಿ.ವಿಷ್ಣುವರ್ಧನ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಹೊರವಲಯದ ಉತ್ತನಹಳ್ಳಿ ಬಳಿ ವಿಶಾಲವಾದ ಮೈದಾನದಲ್ಲಿ ಯುವ ದಸರಾ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಅ.6ರಂದು ಬಾಲಿವುಡ್‌ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್‌ ಮತ್ತು ತಂಡದಿಂದ ಸಂಗೀತ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಅ. 7ರಂದು ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಮತ್ತು ತಂಡದವರಿಂದ ಸಂಗೀತ ಮನರಂಜನೆ, ಅ. 8 ಬಾಲಿಹುಡ್‌ ಖ್ಯಾತಿಯ ರ್ಯಾಪರ್‌ ಬಾದ್‌ ಷಾ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ಅ. 9 ರಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ಅ. 10 ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಯುವ ದಸರಾ ವೀಕ್ಷಣೆಗೆ ಪ್ರತಿನಿತ್ಯ ಸುಮಾರು 50 ರಿಂದ 70 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ. ಮೈಸೂರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. 4 ಎಸ್‌‍ಪಿ., 12 ಡಿಎಸ್‌‍ಪಿ., 37 ಸಿಪಿಐ, 76 ಪಿಎಸ್‌‍ಐ., 110 ಎಎಸ್‌‍ಐ., 600 ಪೊಲೀಸರು, 100 ಮಹಿಳಾ ಪೊಲೀಸ್‌‍ ಸಿಬ್ಬಂದಿ, 300 ಹೋಂ ಗಾರ್ಡ್‌ಗಳು ಸೇರಿದಂತೆ 1239 ಮಂದಿ ಬಂದೋಬಸ್ತ್‌ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ 6 ಕೆಎಸ್‌‍ಆರ್‌ಪಿ., 10 ಡಿಎಆರ್‌., 10 ಎಎಸ್‌‍ಸಿ., 4 ಕ್ಯುಆರ್‌ಟಿ, 2 ಆಂಬ್ಯುಲೆನ್‌್ಸ, 2 ಅಗ್ನಿಶಾಮಕ ದಳದ ವಾಹನ, ಒಂದು ಮೊಬೈಲ್‌ ಕಮಾಂಡೋ ವಾಹನ ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!