ಉದಯವಾಹಿನಿ, ಚಿತ್ರದುರ್ಗ: ‘ಮುಡಾ ಹಗರಣ ಕುರಿತಂತೆ ಮುಖ್ಯಮಂತ್ರಿ ತಪ್ಪೆಸಗಿರುವುದನ್ನು ಹೈಕೋರ್ಟ್ ಉಲ್ಲೇಖಿಸಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯಕ್ಕೂ ಗೌರವ ನೀಡದೇ ಭಂಡತನ ತೋರುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಆರೋಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿ ಅವರು ‘ಮುಖ್ಯಮಂತ್ರಿಗಳಿಗೆ ತಮ್ಮ ಸ್ವಾರ್ಥವೇ ಹೆಚ್ಚಾಗಿದೆ. ಬಿಜೆಪಿ ಮುಖಂಡರ ಆರೋಪ, ರಾಜ್ಯಪಾಲರ ಹೇಳಿಕೆಗಳನ್ನು ಬದಿಗೆ ಇಡೋಣ. ಹೈಕೋರ್ಟ್ ಮುಖ್ಯಮಂತ್ರಿಗಳ ತಪ್ಪುಗಳನ್ನು ಗುರುತಿಸಿದ್ದು ಅದನ್ನು ಪರಿಗಣಿಸಿ ಅವರು ರಾಜೀನಾಮೆ ನೀಡಬೇಕಾಗಿತ್ತು. ಮುಡಾ ಸಂಬಂದ ಹೈಕೋರ್ಟ್ ತೀರ್ಪಿಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಲಿ’ ಎಂದರು. ‘ಅಹಿಂದ ಸಮುದಾಯಗಳ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ. ಜನರ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ರಾಜ್ಯದ ಜನರಿಗೆ ಮುಖ್ಯಮಂತ್ರಿಗಳು ವಂಚಿಸಿದ್ದಾರೆ’ ಎಂದು ಆರೋಪಿಸಿದರು.
