ಉದಯವಾಹಿನಿ, ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಶನಿವಾರ ಮಕ್ಕಳಿಗಾಗಿ ಏರ್ಪಡಿಸಿದ್ದ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು.ಸ್ಪರ್ಧೆಯಲ್ಲಿ ಭಾಗವಹಿಸಿದ್ದ 32 ಸ್ಪರ್ಧಿಗಳ ಪೈಕಿ ಪ್ರಥಮ ಸ್ಥಾನ ಕೋಟದ ಅದ್ವಿತಿ ಎ.ಪೂಜಾರಿಗೆ ಲಭಿಸಿತು.ಮಲ್ಪೆಯ ತಪಸ್ಯಾ ನಾಗಪ್ರಸಾದ್ ದ್ವಿತೀಯ, ತೃತೀಯ ಬಹುಮಾನ ಕಾಪುವಿನ ಸನಿಹಾ ಕೆ ಪಾಲಾಯಿತು. ವಿದುಷಿ ರಶ್ಮಿ ಸರಳಾಯ, ಶ್ರದ್ಧಾ ಪ್ರಭು ಮತ್ತು ದೀಪ್ತಿಶ್ರೀ ಜೋಗಿ ತೀರ್ಪುಗಾರರಾಗಿದ್ದರು.
ಮೊಗವೀರ ಭವನದಲ್ಲಿ ಮಹಾಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯೂ ಗಮನ ಸೆಳೆಯಿತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆ ತಂಡಗಳಿಂದ ರಥಬೀದಿಯ ಸುತ್ತ ಏಕಕಾಲದಲ್ಲಿ ಸಾಮೂಹಿಕ ಭಜನಾ ಕುಣಿತ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗುರು ಕೌಸಲ್ಯಾ ನಿವಾಸ್ ಮತ್ತು ಬಳಗ, ಬೆಂಗಳೂರಿನ ಎಂ.ಎಸ್. ನಾಟ್ಯಕ್ಷೇತ್ರದಿಂದ ಶ್ರೀರಾಮ ಹನುಮಂತ ನೃತ್ಯ ರೂಪಕ ನಡೆಯಿತು.
ಇಂದಿನ ಕಾರ್ಯಕ್ರಮ: ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ವಿಭಾಗಗಳ ಕುಸ್ತಿ ಸ್ಪರ್ಧೆ ಉಚ್ಚಿಲದ ಸರಸ್ವತಿ ಮಂದಿರ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆಯಲಿದೆ.ಮಧ್ಯಾಹ್ನ ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ ಉಡುಪಿಯ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎನ್.ಆರ್. ದಾಮೋದರ ಶರ್ಮ ದುರ್ಗಾರಾಧನೆಯ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ. ಕುಂಕುಮನಾರ್ಚನೆ, ಸಾಮೂಹಿಕ ದಾಂಡಿಯಾ ನೃತ್ಯ, ಕುದ್ರೋಳಿ ಗಣೇಶ್ ಅವರಿಂದ ರಾತ್ರಿ ಜಾದೂ, ಹಾಸ್ಯ-ಮನರಂಜನೆ ಮ್ಯಾಜಿಕ್ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!