ಉದಯವಾಹಿನಿ, ಬಸವಕಲ್ಯಾಣ : ತಾಲೂಕಿನ ಮುಡುಬಿ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ತುಂಬಿ ಹರಿಯುತ್ತಿರುವ ಹಳ್ಳದಾಟಲು ಸಾಧ್ಯವಾಗದೆ ರೈತರು ಪರದಾಡಿದ ಪ್ರಸಂಗ ಏಕಲೂರುವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಜರುಗಿದೆ.
ಸೋಯಾಬೀನ್ ರಾಶಿಗೆಂದು ರೈತರು ಜಮೀನುಗಳಿಗೆ ತೆರಳಿದರು, ಈ ವೇಳೆ ಸಂಜೆ 4 ರ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆಯಿಂದಾಗಿ ಭರ್ತಿಯಾದ ಚಕ್ ಡ್ಯಾಮ್ ಒಂದು ತುಂಬಿ ಹರಿದಿದ್ದು, ಹೀಗಾಗಿ ರಭಸವಾಗಿ ಹರಿಯುತ್ತಿರುವ ಹಳ್ಳದ ನೀರು ದಾಟಲು ಸಾಧ್ಯವಾಗದೆ ರೈತರು ಪರದಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭಾವಿಸಿದ ಗ್ರಾಮದ ಪ್ರಮುಖರಾದ ನಾಮದೇವ ಚಿಂತಾಲೆ, ಸುನಿಲ್ ಖೋಲೆ, ಪವನ್ ಚಿಂತಾಲೆ, ವಾಮನರಾವ್ ಜಮಾದಾರ್, ಓಂಕಾರ್ ಚಿಂತಾಲೆ ಸೇರಿದಂತೆ ಪ್ರಮುಖರು ಹಳ್ಳದ ಆಚೆ ಸಿಲುಕಿದ ಮಹಿಳೆಯರು ಸೇರಿದಂತೆ ಸುಮಾರು 20ಕ್ಕೂ ಅಧಿಕ ಜನ ರೈತರನ್ನು ಹಗ್ಗದ ಸಹಾಯದೊಂದಿಗೆ ಹರಸಹಾಸ ಪಟ್ಟು ಹಳ್ಳದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರಿ ಪ್ರಮಾಣದಲ್ಲಿ ಮಳೆ ಆದಾಗ ಈ ಸ್ಥಳದಲ್ಲಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಈ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!