ಉದಯವಾಹಿನಿ, ಬೆಂಗಳೂರು: ಮುಡಾ ಪ್ರಕರಣದಿಂದ ಸರ್ಕಾರಕ್ಕೆ ಸಾಕಷ್ಟು ಮುಜುಗರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜ ಯೇಂದ್ರ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್‌‍ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಯಾವುದೇ ಸಂದರ್ಭದಲ್ಲೂ ಬೀಳಬಹುದು. ಸಿದ್ದರಾಮಯ್ಯನವರು ಈಗಲಾದರೂ ಬಂಡತನ ಬಿಟ್ಟು ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಅದೇನೋ ಕಟ್ಟಡದ ನಕ್ಷೆಯನ್ನು ಹಿಡಿದುಕೊಂಡು ಅವರಿಗೆ ವಿವರಣೆ ನೀಡುತ್ತಿದ್ದರು. ಮತ್ತೊಂದು ಕಡೆ ಅನೇಕರು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ಸರ್ಕಾರ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರಿಗೆ ಗೌರವ ಇದ್ದರೆ ಮೊದಲು ರಾಜೀನಾಮೆ ಕೊಡಿ.  ರಾಜ್ಯದಲ್ಲಿ ಒಂದು ರೀತಿ ಅರಾಜಕತೆ ಸೃಷ್ಟಿಯಾಗಿದೆ. ಕೆಲವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತಾರೆ. ವಾಲೀಕಿ ಮತ್ತು ಮುಡಾ ಪ್ರಕರಣ ತನಿಖೆಯಾಗಬೇಕು. ಡಿ.ಕೆ.ಶಿವಕುಮಾರ್‌ ಪ್ಲಾನ್‌ ಹಾಕಿಕೊಂಡೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ಅವೈಜ್ಞಾನಿಕದಿಂದ ಕೂಡಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದರು. ಈ ವರದಿಯ ಬಗ್ಗೆ ಬಿಜೆಪಿ ಮಾತ್ರವಲ್ಲದೆ ಒಕ್ಕಲಿಗರ ಸಂಘ ವೀರಶೈವ ಮಹಾಸಭಾ ಸೇರಿದಂತೆ ಅನೇಕರು ಆಕ್ಷೇಪಿಸಿದ್ದಾರೆ. ಸ್ವತಃ ಸಂಪುಟದ ಸಹೋದ್ಯೋಗಿಗಳೇ ವರದಿ ಅನುಷ್ಠಾನ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರಿಗೂ ಕೂಡ ಅನ್ಯಾಯವಾಗದಂತೆ ಸರ್ಕಾರ ಕ್ರಮ ಜರುಗಿಸಲಿ ಎಂದು ಕೋರಿದರು.

 

Leave a Reply

Your email address will not be published. Required fields are marked *

error: Content is protected !!