ಉದಯವಾಹಿನಿ, ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಪೊಲೀಸರ ರಿವಾಲ್ವರ್‌ ಸದ್ದು ಮಾಡಿದ್ದು, ಗುಂಡೇಟಿನಿಂದ ಡಕಾಯಿತ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ಗೋಕುಲ ರೋಡ್‌ ಪೊಲೀಸರು ಹಾರಿಸಿದ ಗುಂಡು ತಗುಲಿ ಮಹೇಶ್‌ ಸೀತಾರಾಮ್‌ ಕಾಳೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಸುಕಿನ ಜಾವ ಡಕಾಯಿತ ಮಹೇಶ್‌ ಮತ್ತು ಈತನ ಗ್ಯಾಂಗ್‌ ಮನೆ ದರೋಡೆಗೆ ಇಳಿದಿತ್ತು. ಈ ವಿಷಯ ತಿಳಿದು ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿ ಮಹೇಶ್‌ ಸೀತಾರಾಮ್‌‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ.
ಆರೋಪಿ ಮಹೇಶನನ್ನು ವಿಚಾರಣೆಗೊಳಪಡಿಸಿದಾಗ, ಉಳಿದ ಆರೋಪಿಗಳು ಇರುವ ಜಾಗ ತೋರಿಸುತ್ತೇನೆ ಎಂದು ಹೇಳಿದ್ದಾನೆ.

ಪೊಲೀಸರು ಆತನನ್ನು ಸ್ಥಳಕ್ಕೆ ಕರೆದೊಯ್ಯುತ್ತಿದ್ದಂತೆ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಗೋಕುಲ ರೋಡ್‌ ಪೊಲೀಸ್‌‍ ಠಾಣೆಯ ಪಿಎಸ್‌‍ಐ ಸಚಿನ್‌ ದಾಸರೆಡ್ಡಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಪಿಎಸ್‌‍ಐ ಹಾರಿಸಿದ ಗುಂಡು ಮಹೇಶ್‌ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆರೋಪಿಯನ್ನು ಸುತ್ತುವರೆದು ವಶಕ್ಕೆ ಪಡೆದು ಹುಬ್ಬಳ್ಳಿ ಕಿಮ್ಸ್‌‍ಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಪಿಎಸ್‌‍ಐ ಸಚಿನ್‌ ಹಾಗೂ ಕಾನ್‌್ಸಟೇಬಲ್‌ ವಸಂತ ಗುಡಿಗೇರಿ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್‌‍ ಕಮೀಷನರ್‌ ಶಶಿಕುಮಾರ್‌ ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದರು.

Leave a Reply

Your email address will not be published. Required fields are marked *

error: Content is protected !!