ಉದಯವಾಹಿನಿ, ಬೆಂಗಳೂರು: ಮೂಡಾ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕವಾಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗ ಮೂಡಾ ಹಗರಣದ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲು ಜಾತಿಗಣತಿಯ ವಿಚಾರವನ್ನು ಮುಂದಕ್ಕೆ ತಂದಿದೆ ಎಂದು ಟೀಕಿಸಿದರು.
ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಅ ವರದಿಗೆ 10 ವರ್ಷ ಆಗಿ ಹೋಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು, ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿದೆ, ಅಲ್ಲವೇ? ಲೋಕಸಭೆ ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲ, ಯಾಕೆ? ಎಂದು ಖಾರವಾಗಿ ತೀಕ್ಷ್ಣವಾಗಿ ಕೇಳಿದರು.
