ಉದಯವಾಹಿನಿ, ರಾಯಚೂರು: ನವರಾತ್ರಿಯ ಪ್ರಯುಕ್ತ ನಗರ ಸೇರಿ ಜಿಲ್ಲೆಯಲ್ಲಿ ಪ್ರಮುಖ ದೇಗುಲಗಳಲ್ಲಿ ದೇವಿಯ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ನೃತ್ಯ ಸ್ಪರ್ಧೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಳೆಗಟ್ಟಿವೆ.
ನವರಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಮುನ್ನೂರುಕಾಪು ಸಮಾಜದ ವತಿಯಿಂದ ಅಕ್ಟೋಬರ್ 3ರಿಂದ 11ರ ವರೆಗೆ ನಗರದ ಗದ್ವಾಲ್ ರಸ್ತೆಯಲ್ಲಿ ಮಾತಾ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.
53ನೇ ನವರಾತ್ರಿ: ನಗರದ ಬ್ರೇಸ್ತವಾರಪೇಟೆಯಲ್ಲಿನ ಉಪ್ಪಾರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ವರೆಗೆ 53ನೇ ನವರಾತ್ರಿ ಉತ್ಸವ ಆಯೋಜಿಸಲಾಗಿದೆ.
ಶನಿವಾರ ಆಂಜನೇಯ ವಾಹನೋತ್ಸವ ಅಂಗವಾಗಿ ಬೆಳಗ್ಗೆ ಸುಪ್ರಭಾತ ಸೇವೆ, ಧ್ವಜಾರೋಹಣ ಕಾರ್ಯಕ್ರಮ, ಸಂಕಲ್ಪ ಸೇವೆ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಹಾಗೂ ಸಂಜೆ 7 ಗಂಟೆಗೆ ಹನುಮಾನ ಚಾಲಿಸ ಪಾರಾಯಣ, ಆಂಜನೇಯ ವಾಹನದ ಪಲ್ಲಕ್ಕಿ ಉತ್ಸವ, ತೊಟ್ಟಿಲ ಸೇವೆ, ಸಂಗೀತ ಸೇವೆ, ನರ್ತನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಸಮಿತಿಯ ಸದಸ್ಯರು, ಬಡಾವಣೆಯ ಯುವಕರು ಉಪಸ್ಥಿತರಿದ್ದರು.
