ಉದಯವಾಹಿನಿ, ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಿರಹಟ್ಟಿ ತಾಲ್ಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ‘ಶಿರಹಟ್ಟಿ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿರುವ ಡಾ.ಚಂದ್ರು ಲಮಾಣಿ ಶಾಸಕರಾಗುವುದಕ್ಕೂ ಮುನ್ನ ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಆಡಳಿತ ಅಧಿಕಾರಿಯಾಗಿದ್ದರು.ಇವರು ನಮ್ಮ ಪ್ರತಿನಿಧಿಯಾದರೆ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಿಪಡಿಸುತ್ತಾರೆ ಎಂಬ ಆಸೆಯೊಂದಿಗೆ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಅವರು ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆಗಳನ್ನೇ ಮರೆತಿದ್ದಾರೆ’ ಎಂದು ಜನರು ದೂರಿದ್ದಾರೆ.
‘ತಾಲ್ಲೂಕಿನ ಬಡ ರೋಗಿಗಳು ಚಿಕಿತ್ಸೆಗೆಂದು ನಿತ್ಯ ತಾಲ್ಲೂಕು ಆಸ್ಪತ್ರೆಗೆ ಬರುತ್ತಿದ್ದು, ಆಸ್ಪತ್ರೆಯಲ್ಲಿನ ವೈದ್ಯರು ಅವರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸಣ್ಣ ಅಪಘಾತ ಸೇರಿದಂತೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತಿದ್ದರೂ ಅವರನ್ನು ವಿನಾಕಾರಣ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇಲ್ಲವೇ, ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲಿ ಇಬ್ಬರು, ಮೂವರು ರೋಗಿಗಳನ್ನು ಒಟ್ಟಿಗೆ ಕರೆದೊಯ್ಯುತ್ತಾರೆ’ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಎಬಿಆರ್‌ಕೆ ಅನುದಾನ ಬಳಕೆ ವಿಫಲ: ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಅಡಿಯಲ್ಲಿ ಮಾರಣಾಂತಿಕ ಕಾಯಿಲೆಗಳ ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಬಹುದು.
