ಉದಯವಾಹಿನಿ, ಲಕ್ಷ್ಮೇಶ್ವರ: ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ನೀಡುವುದಾಗಿ ಆಮಿಷ ಒಡ್ಡಿ ಮೋಸದಿಂದ ಫಸಲನ್ನು ಖರೀದಿಸಿ ರೈತರಿಗೆ ಹಣ ಕೊಡದೆ ವಂಚಿಸುವ ಪ್ರಕರಣಗಳು ಪ್ರತಿವರ್ಷ ವರದಿ ಆಗುತ್ತಲೇ ಇವೆ. ಕಳೆದ ವರ್ಷ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಭಾಗದಲ್ಲೂ ಗೋವಿನಜೋಳ ಖರೀದಿಸಿದ್ದ ವ್ಯಾಪಾರಸ್ಥರು ರೈತರಿಗೆ ಸರಿಯಾಗಿ ಹಣ ಕೊಡದೆ ವಂಚಿಸಿದ್ದರು.
ಅದರಂತೆ ಲಕ್ಷ್ಮೇಶ್ವರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲೂ ಈ ರೀತಿ ರೈತರ ಫಸಲನ್ನು ಖರೀದಿ ಮಾಡುವವರು ಪ್ರತಿವರ್ಷ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ.
ಕಳೆದ ವರ್ಷ ಮಳೆ ಕೊರತೆಯಿಂದಾಗಿ ಗೋವಿನಜೋಳ ಸರಿಯಾಗಿ ಬೆಳೆದಿರಲಿಲ್ಲ. ಆದರೆ ಈ ವರ್ಷ ಉತ್ತಮ ಫಸಲು ಬಂದಿದೆ. ಲಕ್ಷ್ಮೇಶ್ವರ ಸೇರಿದಂತೆ ಹರದಗಟ್ಟಿ, ಕುಂದ್ರಳ್ಳಿ, ಸುವರ್ಣಗಿರಿ, ಸೂರಣಗಿ, ಆದರಹಳ್ಳಿ, ದೊಡ್ಡೂರು, ಅಡರಕಟ್ಟಿ, ಬಾಲೇಹೊಸೂರು ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಈಗಾಗಲೇ ಗೋವಿನಜೋಳದ ಕಟಾವು ಭರದಿಂದ ಸಾಗಿದೆ. ಸಧ್ಯ ಲಕ್ಷ್ಮೇಶ್ವರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗೋವಿನಜೋಳ ಕ್ವಿಂಟಲ್‍ಗೆ ₹2,100-₹2,300 ವರೆಗೆ ಮಾರಾಟವಾಗುತ್ತಿದೆ. ಫಸಲು ಒಕ್ಕಣಿ ನಡೆದಿರುವುದನ್ನು ತಿಳಿದು ಈಗಾಗಲೇ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡಿ ಮುಕ್ತವಾಗಿ ಖಾಸಗಿ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದಾರೆ.
ರೈತರು ಖಾಸಗಿ ವ್ಯಕ್ತಿಗಳಿಗೆ ಫಸಲು ಮಾರಾಟ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ. ಯಾವುದೇ ಆಶೆ ಆಮಿಷಕ್ಕೆ ಒಳಗಾಗಬಾರದು. ಇನ್ನು ಖಾಸಗಿ ಖರೀದಿದಾರರು ಅಲ್ಪ ದರ ಹೆಚ್ಚಿಸಿ ತೂಕದಲ್ಲಿ ಮೋಸ ಮಾಡುವ ಘಟನೆಗಳು ಬೆಳಕಿಗೆ ಬಂದಿವೆ.
ಈಗಾಗಲೇ ಲಕ್ಷ್ಮೇಶ್ವರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಗೋವಿನಜೋಳವನ್ನು ರೈತರ ಕಣಗಳಿಗೆ ತೆರಳಿ ಖರೀದಿಸಲು ಕೆಲ ಖಾಸಗಿ ವ್ಯಾಪಾರಸ್ಥರು ಮುಂದಾಗಿದ್ದಾರೆ. ಇಂಥ ಖರೀದಿದಾರರಿಂದ ರೈತರಿಗೆ ತೂಕ ಮತ್ತು ಅಳತೆಯಲ್ಲಿ ಮೋಸ ಆಗುವ ಸಂಭವ ಇದೆ. ಕಾರಣ ಸಂಬಂಧಿಸಿದ ಎಪಿಎಂಸಿ ಮತ್ತು ತೂಕ ಮತ್ತು ಅಳತೆ ಮಾಪನ ಇಲಾಖೆ ಅಧಿಕಾರಿಗಳು ಸೂಕ್ತ ನಿಗಾವಹಿಸಬೇಕಾದ ಅಗತ್ಯ ಇದೆ. ನಕಲಿ ನೋಟುಗಳನ್ನು ಮುಗ್ದ ರೈತರಿಗೆ ಕೊಡುವ ಅಪಾಯವೂ ಇದೆ. ಕಾರಣ ತಾಲ್ಲೂಕಾಡಳಿತ ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ರೈತರೂ ಕೂಡ ಇಂಥ ವ್ಯಾಪಾರಸ್ಥರೊಂದಿಗೆ ಎಚ್ಚರಿಕೆಯಿಂದ ಇರಬೇಕು.

 

Leave a Reply

Your email address will not be published. Required fields are marked *

error: Content is protected !!