ಉದಯವಾಹಿನಿ, ಹಳೇಬೀಡು: ದ್ವಾರಸಮುದ್ರ ಕೆರೆಗೆ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು ನಿರ್ಮಿಸುತ್ತಿರುವ ಸುರಂಗ ನಾಲೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಎಂಜನಿಯರ್‌ಗಳು ಸವಾಲುಗಳ ಮಧ್ಯೆ ಕೆಲಸ ಮಾಡುತ್ತಿದ್ದು, 2025ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಯೋಜನೆ ಪೂರ್ಣಗೊಳಿಸಲು ಸರ್ಕಾರ ನಿರ್ದಿಷ್ಟ ಸಮಯಕ್ಕೆ ಅನುದಾನ ಬಿಡುಗಡೆ ಮಾಡಿದರೆ ಹಳೇಬೀಡು ಭಾಗದ ರೈತರ ಕನಸು ಸಾಕಾರಗೊಳ್ಳಲಿದೆ.
ಕಾಮಗಾರಿ ಪೂರ್ಣಗೊಂಡು, ಗುರುತ್ವಾಕರ್ಷಣೆ ಶಕ್ತಿಯಿಂದ ಯಗಚಿ ನದಿ ನೀರು ಹೊಯ್ಸಳರ ಕಾಲದಂತೆ ಹಳೇಬೀಡಿಗೆ ಬಂದರೆ, ರೈತರ ಬದುಕು ಹಸನಾಗುತ್ತದೆ. ಪ್ರವಾಸಿ ತಾಣದ ಸೊಬಗು ಸಹ ಹೆಚ್ಚುತ್ತದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.
ಹಳೇಬೀಡು ಭಾಗಕ್ಕೆ ಯಗಚಿ ನದಿಯಿಂದ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು ನಿರ್ಮಿಸುತ್ತಿರುವ ಸುರಂಗ ನಾಲೆಯ ಕಾಂಕ್ರೀಟ್ ಕಾಮಗಾರಿ.
ಹೊಯ್ಸಳರ ಅರಸು ಮೂರನೇ ಬಲ್ಲಾಳನ ಕಾಲದಲ್ಲಿ ಜಿ.ಸೂರಾಪುರ ಹಾಗೂ ರಣಘಟ್ಟ ಬಳಿ ಹರಿಯುತ್ತಿದ್ದ ಯಗಚಿ ನದಿಯಿಂದ, ರಾಜಕಾಲುವೆ ನಿರ್ಮಿಸಿ ರಾಜಧಾನಿ ದ್ವಾರಸಮುದ್ರ (ಹಳೇಬೀಡು) ಮಾತ್ರವಲ್ಲದೆ, ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಕೈಗೊಂಡಿದ್ದರು ಎಂಬುದಕ್ಕೆ ಇಂದಿಗೂ ಕುರುಹುಗಳಿವೆ. ರಾಜಕಾಲುವೆ ಕೆಲವು ಕಡೆ ತೋಟ, ಗದ್ದೆಗಳಾಗಿ ಮಾರ್ಪಟ್ಟಿವೆ. ರಾಜಕಾಲುವೆ ಪುನಶ್ಚೇತನಗೊಂಡು, ನೀರು ಹರಿಯುವಂತಾಗಬೇಕು. ಪ್ರಾಚೀನ ಸಂಸ್ಕೃತಿ ಹಾಗೂ ಪರಂಪರೆ ಉಳಿಯಬೇಕು ಎಂಬುದು ರೈತರು ಮಾತ್ರವಲ್ಲದೇ, ಇತಿಹಾಸಕಾರರು ಹಾಗೂ ಸಂಶೋಧಕರ ಒತ್ತಾಯ.
