ಉದಯವಾಹಿನಿ, ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರದಲ್ಲಿ ತೀವ್ರವಾಗಿ ವಾಯುಭಾರ ಕುಸಿತವಾಗಿರುವ ಪರಿಣಾಮ ನಗರದ ವಿವಿಧೆಡೆ ಶನಿವಾರ ಧಾರಾಕಾರವಾಗಿ ಮಳೆ ಸುರಿದಿದ್ದು, ಹಬ್ಬಕ್ಕೆ ಅಡಚಣೆ ಉಂಟು ಮಾಡಿತ್ತು.
ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದವರಿಗೂ ತೊಂದರೆಯಾಯಿತು. ಹಂಪೆನಗರದಲ್ಲಿ 10 ಮಿಮೀ ಮಳೆಯಾಗಿದೆ.
ಕಳೆದ ವಾರ ಬರೀ ಒಂದೂವರೆ ಗಂಟೆ ಕಾಲ ಸುರಿದ ವರ್ಷಧಾರೆಗೆ ನಗರದ ಹಲವು ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಅಪಾರ್ಟ್ಮೆಂಟ್ ನಿವಾಸಿಗಳು ಜಲದಿಗ್ಬಂಧನಕ್ಕೆ ಒಳಗಾಗಿದ್ದರು. ಬೈಕ್,ಕಾರು ಜಖಂಗೊಂಡರೆ, ಅಂಡರ್ಪಾಸ್, ಜಂಕ್ಷನ್ ಜಲಾವೃತಗೊಂಡಿದ್ದವು. ಮಳೆಯ ಅನಾಹುತಕ್ಕೆ ಜನರು ಚೇತರಿಸಿಕೊಳ್ಳುತ್ತಿರುವ ನಡುವೆಯೂ ನಗರದಲ್ಲಿ ನಿರಂತರವಾಗಿ ಮಳೆ ಸುರಿಯುದಿದ್ದು, ರಾಜಧಾನಿಯ ಜನತೆಗೆ ಆತಂಕ ತಂದೊಡ್ಡಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್, ಓಕುಳಿಪುರ ಅಂಡರ್ಪಾಸ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆಯಲ್ಲಿ ನೀರು ನಿಂತಿತ್ತು.ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ಪೇಟೆ, ಬಳೇಪೇಟೆ, ಕಾಟನ್ಪೇಟೆ, ವಿಜಯನಗರ, ಕಾಮಾಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ ರಸ್ತೆ, .ವಿಶ್ವೇಶ್ವರಯ್ಯಪುರ, ವಿದ್ಯಾಪಿಠ, ಹಗದೂರು, ಯಲಹಂಕ, ಆರ್.ಆರ್. ನಗರ, ವಿ.ನಾಗೇನಹಳ್ಳಿ, ಪುಲಿಕೇಶಿನಗರ, ಅರೆಕೆರೆ, ಎಚ್ಎಸ್ಆರ್ ಲೇಔಟ್, ನಾಗಪುರ, ಕಾಟನ್ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಹೂಡಿ ಸೇರಿ ನಗರ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿಯಿತು.ಹಲವು ಕಡೆಗಳಲ್ಲಿ ಸಿಗ್ನಲ್ ಇಲ್ಲದ ಕಾರಣ ವಾಹನಗಳು ಏಕಾಏಕಿ ನುಗ್ಗಿದ್ದರಿಂದ ವಾಹನ ದಟ್ಟಾಣೆ ಉಂಟಾಯಿತು.ವಿದ್ಯುತ್ ಪೂರೈಕೆ ಸ್ಥಗಿತ ಹಿನ್ನೆಲೆಯಲ್ಲಿ ಬೆಳಕಿಲ್ಲದೆ ನಿವಾಸಿಗಳಿಗೆ ತೊಂದರೆಯಾಯಿತು. ಕೆಲವೆಡೆ ಮಳೆಯ ನೀರು ರಭಸದಿಂದ ಹರಿಯುತ್ತಿತ್ತು. ಕೆಲವೆಡೆ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.
