ಉದಯವಾಹಿನಿ, ಮುಂಡರಗಿ: ಪಟ್ಟಣದ ಹೊರವಲಯದಲ್ಲಿ ಹಾಕಲಾಗಿದ್ದ ಚಿತ್ತರಗಿಯ ಶ್ರೀಕುಮಾರ ವಿಜಯ ವೃತ್ತಿ ನಾಟಕ ಮಂದಿರವು ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಯ ರಭಸಕ್ಕೆ ಸಂಪೂರ್ಣವಾಗಿ ಧರೆಗುರುಳಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಇಡೀ ನಾಟಕ ಮಂದಿರ ಮುಗುಚಿ ಬಿದ್ದಿದ್ದು, ನಾಟಕದ ಪರಿಕರಗಳೆಲ್ಲ ನಾಶವಾಗಿವೆ.
ರಸ್ತೆ, ಉದ್ಯಾನ, ಮನೆ ಮೊದಲಾದವುಗಳ ಪರದೆ ಸೇರಿದಂತೆ ಸುಮಾರು ₹4ಲಕ್ಷ ಮೌಲ್ಯದ ನಾಟಕದ ರಂಗಸಜ್ಜಿಕೆ ಸಂಪೂರ್ಣವಾಗಿ ಹಾಳಾಗಿದೆ.
ಸುಮಾರು ₹1ಲಕ್ಷ ಮೌಲ್ಯದ ನಾಟಕ ರಂಗದೊಳಗಿನ ಆಲಂಕಾರಿಕ ವಿದ್ಯುತ್ ದೀಪಗಳು, ₹1ಲಕ್ಷ ಮೌಲ್ಯದ ಸೌಂಡ್ ಸಿಸ್ಟಮ್‌, ಮೈಕ್ ಸೆಟ್, ಸುಮಾರು 500 ಕುರ್ಚಿ, ಪೀಠೋಪಕರಣ, ಬ್ಯಾನರ್ ಸೇರಿದಂತೆ ಸುಮಾರು ₹10 ಲಕ್ಷ ಮೌಲ್ಯದ ನಾಟಕದ ಸಾಮಗ್ರಿಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ.
ನಾಟಕ ಮಂದಿರದೊಳಗೆ ನಿಲ್ಲಿಸಿದ್ದ ಒಂದು ಕಾರ್ ಹಾಗೂ ಎರಡು ಬೈಕ್‌ ಜಖಂಗೊಂಡಿವೆ. ಗಣೇಶ ಚತುರ್ಥಿ, ದಸರಾ ಮೊದಲಾದ ಹಬ್ಬಗಳ ಅಂಗವಾಗಿ ನಾಟಕದ ಬಹುತೇಕ ಕಲಾವಿದರು ರಾಜ್ಯದ ವಿವಿಧ ಭಾಗಗಳಲ್ಲಿ ಅನ್ಯ ಕಾರ್ಯಕ್ರಮಗಳಲ್ಲಿ ತೊಡಗಿದ್ದರು. ಹೀಗಾಗಿ ಕಳೆದ ಹಲವು ದಿನಗಳಿಂದ ನಾಟಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಭಾನುವಾರದಿಂದ ನಾಟಕ ಮಂದಿರದಲ್ಲಿ ಹೊಸ ನಾಟಕ ಪ್ರದರ್ಶನ ನಡೆಯುವುದಿತ್ತು.

Leave a Reply

Your email address will not be published. Required fields are marked *

error: Content is protected !!