ಉದಯವಾಹಿನಿ, ಬೆಂಗಳೂರು: ಹಬ್ಬ ಹಾಗೂ ವಾರಾಂತ್ಯದ ರಜೆ ಮುಗಿಸಿ ವಾಪಸ್ ಬೆಂಗಳೂರಿಗೆ ಆಗಮಿಸುತ್ತಿದ್ದ ಜನರಿಗೆ ಬೆಳ್ಳಂಬೆಳಿಗ್ಗೆ ತುಂತುರು ಮಳೆಯ ನಡುವೆ ಸಂಚಾರದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸುವಂತಾಯಿತು.
ವಿಜಯದಶಮಿ, ಆಯುಧಪೂಜೆ ಹಾಗೂ ಭಾನುವಾರದ ಸಾಲುಸಾಲು ರಜೆ ಹಿನ್ನಲೆಯಲ್ಲಿ ನಗರ ನಿವಾಸಿಗಳು ತಮ್ಮತಮ್ಮ ಊರು, ಪ್ರವಾಸಿತಾಣ, ದೇವಾಲಯಗಳಿಗೆ ಭೇಟಿ ನೀಡಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ವರುಣನ ಸಿಂಚನವಾಗುತ್ತಿದ್ದು, ಸಂಚಾರದಟ್ಟಣೆ ಉಂಟಾಗಿ ಕೆಲಕಾಲ ತೊಂದರೆ ಅನುಭವಿಸುವಂತಾಯಿತು.
ತುಮಕೂರು ರಸ್ತೆಯ ನೆಲಮಂಗಲ ಟೋಲ್, ಮೈಸೂರು ರಸ್ತೆ, ಏರ್‌ಪೋರ್ಟ್ ರಸ್ತೆ, ಯಲಹಂಕ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಬೆಳ್ಳಂಬೆಳಿಗ್ಗೆ ಟ್ರಾಫಿಕ್ ಜಾಮ್ ಕಂಡುಬಂದಿತು.ಇಂದು ಕೆಲಸಕ್ಕೆ ಆಗಮಿಸಬೇಕಾಗಿದ್ದ ಜನರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸುವಂತಾಯಿತು. ಶಾಲೆಗಳು ಸಹ ಇಂದಿನಿಂದ ಪ್ರಾರಂಭವಾಗಿದ್ದು, ಏಕಕಾಲದಲ್ಲಿ ವಾಹನಗಳು ರಸ್ತೆಗಿಳಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೊಯ್ದುಕೊಂಡೇ ತಮ್ಮ ಕಚೇರಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
