ಉದಯವಾಹಿನಿ, ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಶಕ್ತಿ ಗಣಪತಿ ಪೂಜಾ ಸಮಿತಿ ಹಾಗೂ ನಗರಸಭೆ ನೇತೃತ್ವದಲ್ಲಿ 53ನೇ ವರ್ಷದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಭಾನುವಾರ ಸಂಜೆ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.ಗಣೇಶ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ಡಿ.ಜೆ ಸದ್ದಿಗೆ ನೂರಾರು ಯುವಕರು ಕುಣಿದು ಸಂಭ್ರಮಿಸಿದರು.
ಮತ್ತೊಂದು ಕಡೆ ನಾಸಿಕ್ ಡೋಲು, ಸ್ಥಳೀಯ ಬ್ಯಾಂಡ್ ಸೆಟ್ ಹಾಡಿಗೆ ಗ್ರಾಮೀಣ ಪ್ರದೇಶದ ಯುವಕರು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ಕೋಲಾಟ, ವೀರಗಾಸೆ, ಜಾನಪದ ವಾದ್ಯಗಳು, ಡಿ.ಜೆ ನಡುವೆ ಜುಗಲ್ ಬಂದಿ ಏರ್ಪಟ್ಟಿದ್ದತ್ತು. ನೆಹರೂ ಮೈದಾನದಿಂದ ಜಾನಪದ ವಾದ್ಯ, ಪಟಾಕಿ ಸಿಡಿತದೊಂದಿಗೆ ಆರಂಭವಾದ ಮೆರವಣಿಗೆ ಪ್ರಧಾನ ರಸ್ತೆಯ ಮೂಲಕ ಗಾಂಧಿ ವೃತ್ತ, ಆಸ್ಪತ್ರೆ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರಂಜಿತಾ ಹೋಟೆಲ್ ಮಾರ್ಗದ ಮೂಲಕ ಸಾಗಿತು.ತುಂತುರು ಮಳೆಯ ಮಧ್ಯೆಯೇ ಉತ್ಸಾಹದಿಂದ ಯುವಕರು, ಮಕ್ಕಳು, ಮಹಿಳೆಯರು ಕುಣಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಪೂಜಾ ಸಮತಿ ಅಧ್ಯಕ್ಷ ಕೆ.ಟಿ.ಆರ್. ಪ್ರಕಾಶ್, ನಗರಸಭೆ ಅಧ್ಯಕ್ಷ ಜಿ.ಆರ್. ಅಜೇಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಬಿ.ಎನ್. ಪ್ರಕಾಶ್, ಜಿ.ಎಸ್. ತಿಪ್ಪೇಸ್ವಾಮಿ, ಜಗದೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಸದಸ್ಯರು, ಪೂಜಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
