ಉದಯವಾಹಿನಿ, ಬೆಂಗಳೂರು: ಜಗತ್‌ಪ್ರಸಿದ್ಧ ಮೈಸೂರು ದಸರಾದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಪ್ರದರ್ಶನಗೊಂಡ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಸ್ತಬ್ಧಚಿತ್ರವು ಪ್ರಥಮ ಬಹುಮಾನ ಗಳಿಸಿದೆ ಎಂದು ದಸರಾ ಸ್ತಬ್ಧಚಿತ್ರ ಉಪಸಮಿತಿ ವಿಶೇಷಾಽಕಾರಿಗಳು ಪ್ರಕಟಿಸಿದ್ದಾರೆ.
1924ರ ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಐತಿಹಾಸಿಕ 39ನೇ ಅಧಿವೇಶನ ನಡೆದಿತ್ತು. ಈ ವರ್ಷ ಅಧಿವೇಶನಕ್ಕೆ 100 ವರ್ಷಗಳು ತುಂಬುತ್ತಿದೆ.ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಜಂಬೂ ಸವಾರಿಯ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ ಈ ಎರಡು ಮಹತ್ವದ ಘಟನೆಗಳನ್ನು ಆಕರ್ಷಕವಾಗಿ ಬಿಂಬಿಸುವ ಸ್ತಬ್ದಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು.
ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾ ಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು. ಅಸ್ಪಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕರೆನಿಸಿಕೊಂಡರು.
ಬಸವಣ್ಣನವರ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿ ಮಹತ್ವದ ಹೆಜ್ಜೆಯನ್ನಿಟ್ಟರು. ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶಿಸಿದರು.
ಈ ಮಹತ್ವದ ಘಟನೆಗೆ ಸಾಕ್ಷಿಯೆಂಬಂತೆ ಸ್ತಬ್ದಚಿತ್ರದ ಮುಂಭಾಗದಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರ ಮಾದರಿ ಪ್ರತಿಕೃತಿಯನ್ನು ಚಿತ್ರಿಸಲಾಗಿತ್ತು. ಬಸವಣ್ಣನವರು ಕುಳಿತ ಪೀಠದ ಕೆಳಭಾಗದಲ್ಲಿ ಕೂಡಲಸಂಗಮದ ಮುಖ್ಯದ್ವಾರದ ಮಾದರಿಯನ್ನು ಚಿತ್ರಿಸಲಾಗಿತ್ತು.

 

Leave a Reply

Your email address will not be published. Required fields are marked *

error: Content is protected !!