ಉದಯವಾಹಿನಿ, ನವದೆಹಲಿಯ : ಹಳೆಯ ಸಂಸತ್ ಭವನದ ಪಕ್ಕದಲ್ಲಿಯೇ ನಿರ್ಮಿಸಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28, ಭಾನುವಾರ) ಲೋಕಾರ್ಪಣೆಗೊಳಿಸಿದರು.ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಜನ್ಮದಿನದಂದೇ ಹೊಸ ಸಂಸತ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿನೂತನವಾಗಿ ನಮನ ಸಲ್ಲಿಸಿದರು.ವೀರ್ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜನ್ಮದಿನ ಸ್ಮರಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ನಮಿಸಿದರು.ಭಾನುವಾರ ಬೆಳಗ್ಗೆ ನೂತನ ಸಂಸತ್ ಭವನದಲ್ಲಿ ಗಣ ಹೋಮ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅನಂತರ ಶೃಂಗೇರಿ ಶಾರದಾ ಪೀಠದ ಪುರೋಹಿತರು ನಡೆಸಿದ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ನಂತರ ಸಂಸತ್ ಭವನ ನಿರ್ಮಾಣದಲ್ಲಿ ಭಾಗಿಯಾಗಿದ್ದ ಶ್ರಮಿಕರಿಗೆ ಸನ್ಮಾನ ಮಾಡಿದರು.ಸರ್ವಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದಾಗ, ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಉಪಸ್ಥಿತರಿದ್ದರು. ಪೂಜಾ ಕೈಂಕರ್ಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್ ಅನ್ನು ಹಸ್ತಾಂತರಿಸಲಾಯಿತು. ನಂತರ ಅದನ್ನು ಲೋಕಸಭೆ ಸ್ಪೀಕರ್ ಕೂರುವ ಜಾಗದ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
