ಉದಯವಾಹಿನಿ, ಆಲೂರು: ತಾಲ್ಲೂಕಿನಾದ್ಯಂತ 15 ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಆಗಾಗ್ಗೆ ಸುರಿಯುವ ಮಳೆಯಿಂದ ಮುಸುಕಿನ ಜೋಳದ ತೆನೆಗಳಿಗೆ ಗಿಡದಲ್ಲಿಯೇ ಫಂಗಸ್ ದಾಳಿ, ಮೊಳಕೆ ಒಡೆಯುವ ಸಮಸ್ಯೆ ಉಂಟಾಗಿದ್ದು, ಅಳಿದುಳಿದ ಫಸಲು ಸಿಗದೆ ರೈತರು ನಷ್ಟದ ಆತಂಕದಲ್ಲಿದ್ದಾರೆ.ಜೋಳ ಬಿತ್ತನೆ ಮಾಡಿದ ಸುಮಾರು ನಾಲ್ಕು ತಿಂಗಳ ನಂತರ ತೆನೆಗಳನ್ನು ಕಟಾವು ಮಾಡಬೇಕು.
ಬಿತ್ತನೆ ಮಾಡಿದ ಸಂದರ್ಭದಲ್ಲಿ ಭಾರಿ ಮಳೆಗೆ ತುತ್ತಾಯಿತು. ನಂತರದ ದಿನಗಳಲ್ಲಿ ಅಳಿದುಳಿದು ಹುಟ್ಟಿದ ಗಿಡಗಳಿಗೆ ರೋಗ ರುಜಿನಗಳು ಎದುರಾದವು. ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿ ಗಿಡಗಳನ್ನು ರೈತರು ಉಳಿಸಿಕೊಂಡಿದ್ದರು. ಕಾಳುಗಟ್ಟಿಯಾಗಿ ಸುಮಾರು ಒಂದು ತಿಂಗಳು ಕಳೆಯಿತು. ಕೆಲ ರೈತರು ಕಟಾವು ಮಾಡಿದಾಗ ತುಂತುರು ಮಳೆಯಾಗಿ ಜೋಳ ತೋಯ್ದಿತ್ತು. ಕಾಳು ಬಿಡಿಸಲು ಸಾಧ್ಯವಾಗದೇ ಇದ್ದಲ್ಲೇ ಭೂಸು(ಫಂಗಸ್) ಹಿಡಿದು, ಬಲೆಗಟ್ಟುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಜೋಳ ಕೊಯ್ಲು ಮಾಡಲು ಉತ್ತಮ ಬಿಸಿಲಿನ ವಾತಾವರಣ ಇರಬೇಕು. ಮೋಡ ಇದ್ದಾಗ ಕೊಯ್ಲು ಮಾಡಿದರೆ ಒಣಗಿಸಲು ತೊಂದರೆಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಮೋಡ ಕವಿದಿರುವುದರಿಂದ ಕೆಲ ರೈತರು ಇನ್ನೂ ಜೋಳವನ್ನು ಕಟಾವು ಮಾಡಿಲ್ಲ ಎನ್ನುತ್ತಾರೆ ರೈತರು.
ಬಹುತೇಕ ಕೃಷಿ ಕಾರ್ಮಿಕರ ಮಕ್ಕಳು ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ವಲಸೆ ಹೋಗಿದ್ದು, ಸಕಾಲದಲ್ಲಿ ಕೊಯ್ಲು ಮಾಡಲು ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಕೃಷಿ ಮಾಡಲು ಕಾರ್ಮಿಕರ ಅಭಾವ ತೀವ್ರವಾಗಿದೆ.
ಆದರೆ, ಜೋಳವನ್ನು ಯಂತ್ರದ ಮೂಲಕ ಬಿಡಿಸಲು ಪ್ರಯತ್ನಿಸಿದರೆ, ಶೇ 30 ಕ್ಕೂ ಹೆಚ್ಚು ತೆನೆಗಳು ಯಂತ್ರಕ್ಕೆ ಸಿಲುಕದೇ ಭೂಮಿಯಲ್ಲಿ ಉಳಿಯುತ್ತವೆ. ಹೊಲದಲ್ಲಿ ಉಳಿದ ಜೋಳವನ್ನು ಪುನಃ ಕಾರ್ಮಿಕರ ಸಹಾಯದಿಂದ ಆಯ್ದು, ಶೇಖರಿಸಿ ಕಾಳು ಬಿಡಿಸಬೇಕು. ಆಗ ಎರಡು ಪಟ್ಟು ಹಣ ಖರ್ಚಾಗುತ್ತದೆ. ಮಾರಾಟ ಮಾಡುವ ಸಂದರ್ಭದಲ್ಲಿ ಜೋಳ ಒಣಗಿಲ್ಲವೆಂಬ ಸಬೂಬು ಹೇಳಿ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಖರೀದಿ ಮಾಡುತ್ತಾರೆ ಎಂದು ರೈತರು ನಷ್ಟವನ್ನು ವಿವರಿಸಿದರು.
