ಉದಯವಾಹಿನಿ, ಪಂಚಕುಲ: ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ನಯಾಬ್ ಸಿಂಗ್ ಸೈನಿ ಅವರು ಹರಿಯಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.ಹರಿಯಾಣದ ಪಂಚಕುಲದ ಸೆಕ್ಟರ್ 5ರ ಪರೇಡ್ ಗ್ರೌಂಡ್‌ನಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ನೂತನ ಸಿಎಂ ನಯಾಬ್ ಸಿಂಗ್ ಸೈನಿ ಮತ್ತು ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಇದಕ್ಕೆ ಸೆಡ್ಡು ಹೊಡೆಯುವಂತೆ ಎನ್‌ಡಿಎ ಕೂಡ ಶಕ್ತಿ ಪ್ರದರ್ಶನ ನಡೆಸಿತು. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಮತ್ತು ಬಿಜೆಪಿರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಪ್ರೇಮಖಂಡು, ಹಿಮಂತ ಬಿಸ್ವಾಸ್, ವಿಷ್ಣುದೇವ್ ಸಾಯಿ, ಪ್ರಮೋದ್ ಸಾವಂತ್, ಭೂಪೇಂದ್ರ ಪಟೇಲ್, ಮೋಹನ್ ಯಾದವ್, ಧಿರೇನ್ ಸಿಂಗ್, ಮೋಹನ್ ಚರಣ್ ಮಾಂಜಿ, ಭಜನ್‌ಲಾಲ್ ಶರ್ಮ, ಮಾಣಿಕ್ ಸಹಾ, ಪುಷ್ಕರ್ ಸಿಂಗ್ ಧಾಮಿ, ಎನ್‌ಡಿಎ ಮಿತ್ರ ಪಕ್ಷಗಳ ಮುಖ್ಯಮಂತ್ರಿಗಳಾದ ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು, ಏಕನಾಥ್ ಸಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ಮುಖಂಡರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ಎನ್‌ಡಿಎ ಶಕ್ತಿ ಪ್ರದರ್ಶನವೆಂದೇ ಬಿಂಬಿತವಾಗಿದ್ದ ಈ ಸಮಾರಂಭವು ಮುಂಬರುವ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಗ್ಗಟು ಪ್ರದರ್ಶನದ ವೇದಿಕೆಯಾಗಿ ಪರಿಣಮಿಸಿತ್ತು. ಸಮಾರಂಭದಲ್ಲಿ ಸುಮಾರು 50,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಮೈದಾನದ ಸುತ್ತ 14 ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಮುನ್ನ ಸೈನಿ ಅವರು ಮಹರ್ಷಿವಾಲ್ಮೀಕಿ ಜಯಂತಿ ಹಿನ್ನಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿ ಜಯಂತಿ ದಿನದಂದು ನಾನು ಪ್ರಮಾಣ ವಚನ ಸ್ವೀಕರಿಸಿದ್ದು ನನ್ನ ಪುಣ್ಯ. ಅವರ ಆದರ್ಶಗಳ ಮೂಲಕ ರಾಜ್ಯವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತೇನೆಂದು ವಾಗ್ದಾನ ಮಾಡಿದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಬಿಜೆಪಿ ಐತಿಹಾಸಿಕ 3ನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು.
