ಉದಯವಾಹಿನಿ, ಶಹಾಪುರ: ವಾಯು ಭಾರ ಕುಸಿತದ ಪರಿಣಾಮ ಬೆಳಿಗ್ಗೆಯಿಂದ ಮಂಜು ಕವಿದ ವಾತಾವರಣದ ನಡುವೆ ಆಗಾಗ ಜಿಟಿ ಜಿಟಿ ಮಳೆ ಆರಂಭಗೊಂಡು ಸಂಜೆ ಆಗುತ್ತಿದ್ದಂತೆ ಬಿರುಸು ಪಡೆಯಿತು. ಗ್ರಾಮೀಣ ಪ್ರದೇಶದ ಕೆಲ ಗ್ರಾಮಗಳಲ್ಲಿ ಸುರಿದ ಮಳೆಗೆ ಬೆಳೆದು ನಿಂತ ಪೈರು ಸಂಕಷ್ಟಕ್ಕೆ ಸಿಲುಕಿವೆ.
ಸದ್ಯ ಹತ್ತಿ ಕೀಳುವ (ಬಿಡಿಸುವ) ಕೆಲಸ ಆರಂಭವಾಗಿದೆ. ಅಕಾಲಿಕ ಮಳೆಯಿಂದ ಹತ್ತಿ ಕಪ್ಪು ಬಣ್ಣಕ್ಕೆ ಹಾಗೂ ಕೊಳೆಯುವ ಭೀತಿ ರೈತರನ್ನು ಕಾಡುತ್ತಿದೆ. ಈಗಾಗಲೇ ಹತ್ತಿ ಧಾರಣಿ ನೆಲಕಚ್ಚಿದೆ. ಮುಂದೇನು ಎಂಬ ಆತಂಕ ರೈತರಿಗೆ ತಂದೊಡ್ಡಿದೆ. ‘ಭತ್ತ ಬೆಳೆಗೆ ಸದ್ಯಕ್ಕೆ ತೊಂದರೆ ಇಲ್ಲ. ಆದರೆ, ಗಾಳಿ ಹಾಗೂ ಅಧಿಕ ಮಳೆಯಾದರೆ ಬೆಳೆ ನೆಲಕ್ಕುರುತ್ತದೆ. ತೊಗರಿ ಹಾಗೂ ಮೆಣಸಿನ ಕಾಯಿ ಬೆಳೆಗೆ ವಾತಾವರಣದಲ್ಲಿ ಏರುಪೇರಿನಿಂದ ರೋಗದ ಭೀತಿ ಎದುರಾಗಿದೆ.
