ಉದಯವಾಹಿನಿ, ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಕೆರೆಗಳು ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳು ಜಲಾವೃತಗೊಂಡಿವೆ. ಈ ವರ್ಷ ವಾಡಿಕೆಗಿಂತಲೂ ಹೆಚ್ಚು ಮಳೆಯಾಗುತ್ತಿರುವುದು ಒಂದೆಡೆ ಖುಷಿ ತಂದರೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಕೊಳೆಯುವ ಹಂತ ತಲುಪುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಈಗಾಗಲೇ ಆಲೂಗಡ್ಡೆ, ಸೂರ್ಯಕಾಂತಿ ಸೇರಿದಂತೆ ಹಲವು ತರಕಾರಿ ಬೆಳೆಗಳು ಕಟಾವು ಹಂತಕ್ಕೆ ಬಂದಿದ್ದು ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಭಾರಿ ಮಳೆಯಿಂದ ಆಲೂಗಡ್ಡೆ ಕೀಳಲಾಗದೆ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ತಾಲ್ಲೂಕಿನಲ್ಲಿ 1,200 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದ್ದು ಹಂಗಳ ಹೋಬಳಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ.

ಹಂಗಳ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಬೇರಂಬಾಡಿ ಸುತ್ತಮುತ್ತ ಎರಡು ದಿನಗಳಿಂದ ಎಡೆಬಿಡದೆ ಸುರಿದ ಮಳೆಗೆ ಬಂಡೀಪುರ ಅಭಯಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿರುವ ಹಂಗಳ ಹಿರೀಕೆರೆ ತುಂಬಿ ಕೋಡಿಬಿದ್ದಿದೆ. ಇದರೊಂದಿಗೆ ಮಲ್ಲಯ್ಯನಪುರ ಕೆರೆ, ಬೇರಂಬಾಡಿ ಕೆಂಪುಸಾಗರ, ಬಸವಾಪುರ ಸಮೀಪದ ಸೆತ್ತೆಕಟ್ಟೆಯೂ ಕೋಡಿ ಬಿದ್ದು ಝರಿಯಂತೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ.
ಕೆರೆಯ ನೀರು ಗುಂಡ್ಲುಪೇಟೆ ದೊಡ್ಡಕೆರೆಗೆ ಬಂದು ಸೇರುತ್ತಿದ್ದು, ಹಂಗಳ ದೊಡ್ಡಕೆರೆ, ಬರಗಿ, ಮುಂಟೀಪುರ ಕೆರೆಯೂ ಕೂಡ ತುಂಬುವ ಹಂತಕ್ಕೆ ತಲುಪಿದ್ದು, ರಾಘವಾಪುರ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.ಹೊನ್ನಶೆಟ್ಟರ ಹುಂಡಿ ಕೆರೆ ಏರಿ ಒಡೆಯುವ ಭೀತಿ: ಮಳೆ ಆರ್ಭಟಕ್ಕೆ ತಾಲ್ಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಕೆರೆ ತುಂಬಿ ಏರಿ ಮೇಲೆ ನೀರು ಹರಿಯುತ್ತಿದೆ. ನೀರಿನ ಪ್ರಮಾಣ ಹೆಚ್ಚುತ್ತಲ್ಲೇ ಇದ್ದು ಕೆರೆಗಳು ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಕೆರೆಗಳ ಕೋಡಿ ಒಡೆದರೆ ರೈತರು ಬೆಳೆದ ನೂರಾರು ಎಕರೆ ಫಸಲು ನಾಶವಾಗಲಿದೆ. ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಬೇಕು ಎಂದು ಗ್ರಾಮದ ವೆಂಕಟೇಶ್ ಸೇರಿ ಹಲವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!