ಉದಯವಾಹಿನಿ, ರಾಯಚೂರು: ಮಂಡ್ಯದಲ್ಲಿ ಡಿ.20, 21 ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡದ ಜ್ಯೋತಿ ಹೊತ್ತ ಕನ್ನಡದ ತೇರಿಗೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು.
ರಾಯಚೂರು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಯಚೂರು ತಾಲ್ಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಕನ್ನಡದ ರಥವನ್ನು ಸ್ವಾಗತಿಸಲಾಯಿತು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ತಾಯಪ್ಪ ಬಿ ಹೊಸೂರ, ತಾಲ್ಲೂಕು ಗೌರವ ಕಾರ್ಯದರ್ಶಿ ರಾವುತರಾವ್ ಬರೂರ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ, ಪರಿಷತ್ತಿನ ಪ್ರತಿನಿಧಿ ಯಲ್ಲಪ್ಪ ಮರ್ಚೆಡ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಸದ ಜಿ.ಕುಮಾರ ನಾಯಕ ಮಾತನಾಡಿ, ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆಯು ಕನ್ನಡಿಗರಲ್ಲಿ ನಾಡು ನುಡಿಯ ಜಾಗೃತಿಯನ್ನು ಮೂಡಿಸುತ್ತಿದೆ’ ಎಂದರು.’ಕನ್ನಡಿಗರು ಕನ್ನಡ ರಥವನ್ನು ಸಂಭ್ರಮದಿಂದ ಸ್ವಾಗತಿಸಿ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಬೇಕು’ ಎಂದು ಹೇಳಿದರು.

ರಥವು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನ ರಂಗಮಂದಿರ ಆವರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೂ ಸಂಚರಿಸಿತು. ಮಹಿಳೆಯರು ಪೂರ್ಣಕುಂಭ ಹೊತ್ತ ಮಹಿಳೆಯರು, ವಾದ್ಯವೃಂದವರು ಮೆರವಣಿಯೆಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗೂರು, ರಾಯಚೂರು ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಸ್ವಾಮಿ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ ಬಡಿಗೇರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!