ಉದಯವಾಹಿನಿ, ಹಿರಿಯೂರು: ಪಟ್ಟಣದ ಕೆಲವು ಬಡಾವಣೆ ಹೊರತುಪಡಿಸಿ, ಎಂಟ್ಹತ್ತು ವರ್ಷಗಳ ಹಿಂದೆ ತಲೆ ಎತ್ತಿರುವ ಬಡಾವಣೆಗಳ ರಸ್ತೆಗಳು ಮೂರ್ನಾಲ್ಕು ದಿನಗಳಿಂದ ಹನಿಯುತ್ತಿರುವ ಜಿಟಿಜಿಟಿ ಮಳೆಗೆ ಕೆಸರು ಗದ್ದೆಯಂತಾಗಿವೆ. ಅಲ್ಲಿನ ನಿವಾಸಿಗಳು ನಗರಸಭೆಗೆ ಶಾಪ ಹಾಕುತ್ತಿದ್ದಾರೆ.ನಗರದ ವೇದಾವತಿ ಬಡಾವಣೆಗೆ ಹೊಂದಿಕೊಂಡಿರುವ ಚಂದ್ರಾ ಲೇಔಟ್, ವಾಣಿ ಸರ್ಕಾರಿ ಕಾಲೇಜಿಗೆ ಹೊಂದಿಕೊಂಡಿರುವ ದೇವಗಿರಿ ಬಡಾವಣೆ, ಲಕ್ಷ್ಮಮ್ಮ, ಶ್ರೀನಿವಾಸ, ಸಾಯಿ ಬಡಾವಣೆಯ ರಸ್ತೆಗಳು, ಶಿಕ್ಷಕರ ಬಡಾವಣೆ, ಎಲ್‌ಐಸಿ ಹಿಂಭಾಗದ ಬಡಾವಣೆಯ ರಸ್ತೆಗಳು ಸಣ್ಣಪ್ರಮಾಣದ ಮಳೆ ಬಂದರೂ ಕೆಸರು ಗದ್ದೆಗಳಂತಾಗುತ್ತವೆ.
ಹೊಸದಾಗಿ ಬಡಾವಣೆ ನಿರ್ಮಿಸುವವರು ರಸ್ತೆ, ಚರಂಡಿ, ನಲ್ಲಿ ನೀರಿನ ಸಂಪರ್ಕ, ಒಳಚರಂಡಿ, ವಿದ್ಯುತ್ ಮಾರ್ಗ ಒಳಗೊಂಡಂತೆ ಎಲ್ಲ ಸೌಲಭ್ಯ ಕಲ್ಪಿಸಿ ನಿವೇಶನ ಮಾರಾಟ ಮಾಡುತ್ತಾರೆ. ನಿವೇಶನ ಖರೀದಿಸಿದವರು ನಗರಸಭೆಯಲ್ಲಿ ಸಾಕಷ್ಟು ಹಣ ತೆತ್ತು ತಂತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳುತ್ತಾರೆ. ಬಡಾವಣೆಯ ನಿವೇಶನಗಳು ನಗರಸಭೆಯಲ್ಲಿ ಖಾತೆಯಾದ ನಂತರ ಬಡಾವಣೆಯನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ನಗರಸಭೆಗೆ ಸೇರಿದ್ದಾಗಿರುತ್ತದೆ. ‘ವಾರ್ಡ್ ಸದಸ್ಯರು ಗಟ್ಟಿ ಧ್ವನಿಯವರಾಗಿದ್ದರೆ ರಸ್ತೆ, ಚರಂಡಿಯಂತಹ ಕಾಮಗಾರಿಗಳು ದುರಸ್ತಿಯಾಗುತ್ತವೆ. ಇಲ್ಲವಾದರೆ ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದರೂ ಯಾರೂ ಕೇಳುವುದಿಲ್ಲ. 30×50 ಅಳತೆಯ ನಿವೇಶನದಲ್ಲಿ ಒಂದು ಮನೆ ನಿರ್ಮಿಸಲು ₹ 45,000ದಿಂದ ₹ 50,000 ಅಭಿವೃದ್ಧಿ ಶುಲ್ಕ ತೆರಬೇಕು. ಹೀಗಿದ್ದರೂ ಕನಿಷ್ಠ ಸೌಲಭ್ಯ ಕಲ್ಪಿಸದಿದ್ದರೆ ಹೇಗೆ’ ಎಂದು ಸಾಯಿ ಬಡಾವಣೆಯ ನಿವಾಸಿ, ನಿವೃತ್ತ ಪ್ರಾಂಶುಪಾಲ ರಮೇಶ್ ಪ್ರಶ್ನಿಸಿದರು.
