ಉದಯವಾಹಿನಿ, ಚಿತ್ತಾಪುರ: ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಶಕ್ತಿ ದೇವತೆ ಯಲ್ಲಮ್ಮ ದೇವಿಯ ಜಾತ್ರೆಯು ಭಕ್ತರ ಸಡಗರ, ಸಂಭ್ರಮದ ಮಧ್ಯೆ ಅದ್ಧೂರಿಯಾಗಿ ಜರುಗಿತು. ಪಲ್ಲಕ್ಕಿ ಉತ್ಸವದ ಸಂಭ್ರಮ ಕಣ್ಣುಂಬಿಕೊಳ್ಳಲು ಭಕ್ತ ಸಾಗರವೇ ನಾಗಾವಿ ಕ್ಷೇತ್ರಕ್ಕೆ ಹರಿದು ಬರುವ ಮೂಲಕ ದೇವಿಯ ದರ್ಶನ ಭಾಗ್ಯ ಪಡೆದು ಪುನಿತರಾದರು.
ಗುರುವಾರ ಸಿಗಿ ಹುಣ್ಣಿಮೆ ದಿನದಂದು ಪಟ್ಟಣದ ಬ್ರಾಹ್ಮಣ ಸಮಾಜದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ತಹಶೀಲ್ದಾರ ನಾಗಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ ಮಧ್ಯಾಹ್ನ ವಿಘ್ನೇಶ್ವರ ಪೂಜೆ, ಗುರುಪೂಜೆ, ದೇವಿಯ ಪಲ್ಲಕ್ಕಿ ಪೂಜೆ ಜರುಗಿತು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತಹಶೀಲ್ದಾರ ಮಂಗಳಾರತಿ ಮಾಡಿ ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ದೇವಿಯ ಪಲ್ಲಕ್ಕಿ ಮೆರವಣಿಗೆಯು ಸರಾಫ್ ಲಚ್ಚಪ್ಪ ನಾಯಕ್ ಅವರ ಮನೆಯಿಂದ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಿಯ ಮಂದಿರವರೆಗೆ ಭಕ್ತರ ಜಯಘೋಷಗಳೊಂದಿಗೆ ಸಡಗರ, ಸಂಭ್ರಮದಿಂದ ತಲುಪಿತು. ಮೆರವಣಿಗೆಯಲ್ಲಿ ಡಿಜೆ ಸೌಂಡ್’ಗೆ ಯುವಕರು ಕುಣಿದು ಕುಪ್ಪಳಿಸಿದರು. ಡೊಳ್ಳು ಹಲಗೆ ವಾದನ, ಯುವಕರ ನೃತ್ಯ ಎಲ್ಲರ ಗಮನ ಸೆಳೆಯಿತು. ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಜನರು ಪಲ್ಲಕ್ಕಿಯಲ್ಲಿ ಆರೂಢಳಾದ ದೇವಿಯ ಮೂರ್ತಿಗೆ ಹೂವು ಚೆಲ್ಲಿ ನಮಿಸಿದರು. ಜಾತ್ರೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಪೆÇಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದರು.
