ಉದಯವಾಹಿನಿ, ಬೆಂಗಳೂರು: ವಿಧಾನಸಭೆಯ ಉಪಚುನಾವಣೆಯ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಹಾಲಿನ ದರ, ಬಸ್‌‍ ಪ್ರಯಾಣ ದರ, ನೀರಿನ ದರಗಳ ಏರಿಕೆಯ ಶಾಕ್‌ ಎದುರಾಗುವ ಸಾಧ್ಯತೆ ಇದೆ.
ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌, ಪ್ರತಿ ಲೀಟರ್‌ಗೆ 5 ರೂ. ಹಾಲಿನ ದರ ಹೆಚ್ಚಿಸಬೇಕೆಂಬ ಪ್ರಸ್ತಾವನೆಯಿದೆ. ಅದರ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಾಮನಗರದಲ್ಲಿ ನಡೆದ ರೈತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದರು. ರೈತರ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಈಗ ರೈತರ ಅನುಕೂಲಕ್ಕಾಗಿ ಮತ್ತೊಮೆ ದರ ಹೆಚ್ಚಿಸಬೇಕೆಂಬ ಪ್ರಸ್ತಾವನೆ ಇದೆ ಎಂದರು.
ಪ್ರತಿ ಲೀಟರ್‌ ಹಾಲಿಗೆ 50 ಗ್ರಾಂ ಹೆಚ್ಚುವರಿ ಹಾಲನ್ನು ಸೇರ್ಪಡೆ ಮಾಡಿ 2 ರೂ. ದರ ಹೆಚ್ಚಿಸಲಾಗಿತ್ತು. ಇತ್ತೀಚೆಗೆ ಹೆಚ್ಚುವರಿ ಹಾಲಿನ ಪ್ರಮಾಣ ನಾಪತ್ತೆಯಾಗಿದೆ. ಈಗ ನೇರವಾಗಿ ಹಾಲಿನ ದರವನ್ನೇ ಹೆಚ್ಚಿಸುವ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಳಿಕ ನಷ್ಟದಲ್ಲಿರುವ ಕೆಎಸ್‌‍ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಚರ್ಚೆಗಳಾಗಿವೆ.

Leave a Reply

Your email address will not be published. Required fields are marked *

error: Content is protected !!