ಉದಯವಾಹಿನಿ, ಬೆಂಗಳೂರು: ಈಗಾಗಲೇ ಮುಡಾ ಸೈಟು ಹಗರಣ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸಿದ್ದರಾಮಯ್ಯನವರನ್ನು ಕಾಡಲಾರಂಭಿಸಿದೆ. ಅ.18ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದಾಗಿನಿಂದ ಪ್ರಕರಣದಲ್ಲಿ ಆರೋಪಿತರಾಗಿರುವ ಸಿಎಂ ಸಿದ್ದರಾಮಯ್ಯನವರ ಕುಟುಂಬದ ಸದಸ್ಯರಿಗೆ ಹೊಸ ಆತಂಕ ಶುರುವಾಗಿದೆ.
ಜಾರಿ ನಿರ್ದೇಶನಾಲಯ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲೂ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಕ್ರಮವಾಗಿ ಮೊದಲ ಮತ್ತು 2ನೇ ಆರೋಪಿಗಳಾಗಿದ್ದು,
3ನೇ ಮತ್ತು 4ನೇ ಆರೋಪಿಗಳಾದ ಸಿಎಂ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ವಿಚಾರಣೆಯನ್ನು ಈಗಾಗಲೇ ಲೋಕಾಯುಕ್ತ ಪೊಲೀಸರು ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹವೇ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ತಲೆನೋವು ಆಗಿದೆ. 2010ರವರೆಗೆ ಸಿಕ್ಕ ದಾಖಲೆಗಳ ತಾಳೆ ಹಾಕಿರುವ ತನಿಖಾಧಿಕಾರಿಗಳು, ಕಡತಗಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಅವರ ಪಾತ್ರದ ಬಗ್ಗೆ ಇ.ಡಿ ಅಧಿಕಾರಿಗಳಿಗೆ ಮಹತ್ವದ ದಾಖಲೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.  ಎ3, ಎ4 ಬಳಿಯ ದಾಖಲೆಗಳನ್ನು ಸಂಗ್ರಹಿಸಿರುವ ಲೋಕಾಯುಕ್ತ ಪೊಲೀಸರು, 2010ರ ಬಳಿಕ ಸಿಎಂ ಭಾವಮೈದುನನಿಂದ ಸಿಎಂ ಪತ್ನಿಗೆ ಆಸ್ತಿದಾನ ಕಡತಗಳನ್ನು ಪರಿಶೀಲಿಸಿದ್ದಾರೆ. ಭೂ ದಾಖಲೆಯ ಸಹಾಯಕ ನಿರ್ದೇಶಕ(ಎಡಿಎಲ್ಆರ್), ಭೂ ಮಾಪನಾಧಿಕಾರಿ, ಮುಡಾ, ಕಂದಾಯ ಇಲಾಖೆ, ಉಪನೋಂದಣಿ ಅಧಿಕಾರಿಗಳಿಂದಲೂ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!