ಉದಯವಾಹಿನಿ, ಕೋಲಾರ: ಶೃಂಗೇರಿ ಶ್ರೀಶಂಕರ ಮಠ ಹಾಗೂ ಶ್ರೀಶಂಕರ ಸೇವಾಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ನಡೆದ ಶತ ಮಹಾಚಂಡಿಯಾಗ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಗಿದ್ದು, ಋತ್ವಿಕರ ವೇದಘೋಷದೊಂದಿಗೆ ಮಧ್ಯಾಹ್ನ ೧೧-೫೦ರ ಸುಮಾರಿಗೆ ಪೂರ್ಣಾಹುತಿ ಸಲ್ಲಿಸಲಾಯಿತು.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಭಾರತೀತೀರ್ಥ ಮಹಾ ಸ್ವಾಮಿಗಳ ಸನ್ಯಾಸಗ್ರಹಣದ ೫೦ನೇ ವರ್ಷದ ಸುವರ್ಣಭಾರತಿ ಮತ್ತು ಶ್ರೀಶಾರದಾ ಶರನ್ನವರಾತ್ರಿ ಮಹೋತ್ಸವದ ನಿಮಿತ್ತ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀವಿಧುಶೇಖರಭಾರತಿ ಮಹಾಸ್ವಾಮಿಗಳ ಆದೇಶಾನುಸಾರ ಈ ಶತಚಂಡಿಯಾಗ ಹಾಗೂ ಶ್ರೀಲಲಿತಾ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಮ್ಮಚಿಗಿಯ ವೇದ ವಿದ್ವಾನ್ ಡಾ.ರಾಮಚಂದ್ರಭಟ್ಟರ ನೇತೃತ್ವದಲ್ಲಿ ಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ,ಲಾವಣ್ಯ ದಂಪತಿಗಳು ಹಾಗೂ ಹಲವಾರು ಮಂದಿ ವೇದಜ್ಞಾನಿಗಳಾದ ಋತ್ವಿಕರ ವೇದಘೋಷದೊಂದಿಗೆ ಶತಚಂಡಿಕಾಹೋಮ ಸಂಪನ್ನಗೊಂಡಿತು. ಸುಹಾಸಿನಿಯರ ಪೂಜೆ, ಕುಮಾರಿ ಪೂಜೆ, ದಂಪತಿ ಪೂಜೆ ನಡೆಯಿತು.
ಶತಚಂಡಿಕಾಯಾಗಕ್ಕಾಗಿ ಕೋಟೆಯ ಶೃಂಗೇರಿ ಶಂಕರಮಠದ ನಿವೇಶನದಲ್ಲಿ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಭಾರತೀತೀರ್ಥ ಯಾಗಶಾಲೆಯಲ್ಲಿ ಮಳೆ ಬಂದರೂ ಯಾವುದೇ ಅಡೆತಡೆಯಾಗದಿರಲಿ ಎಂದು ಸಕಲ ಸಿದ್ದತೆಗಳನ್ನು ಮಾಡಿತ್ತಾದರೂ, ಚಂಡಿಕಾ ಹೋಮಕ್ಕೆ ವರುಣನ ಕೃಪೆಯೂ ಸಿಕ್ಕಿ ಯಾವುದೇ ರೀತಿಯಲ್ಲೂ ಅಡ್ಡಿಪಡಿಸಲಿಲ್ಲ. ಶಂಕರ ಮಠದ ಭಕ್ತರು ಮಾತ್ರವಲ್ಲ ನಗರದ ವಿವಿಧ ಸಮುದಾಯಗಳ ಸಹಸ್ರಾರು ಮಂದಿ ಪಾಲ್ಗೊಂಡಿದ್ದು, ಬೆಳಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೂ ಹೋಮ ವೀಕ್ಷಿಸಿದರು. ಭಕ್ತರ ಅನುಕೂಲಕ್ಕಾಗಿ ಹೋಮ ವೀಕ್ಷಣೆಗೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು.
ಕಳಸ ಸ್ಥಾಪನೆ, ಗಣಹೋಮ, ವಾಸ್ತುಹೋಮ, ಶತಚಂಡಿ ಪಾರಾಯಣದೊಂದಿಗೆ ಆರಂಭಗೊಂಡಿದ್ದ ಹೋಮಪೂಜಾ ಕಾರ್ಯಗಳು ಇಂದು ಶತಚಂಡಿಹೋಮ ಹಾಗೂ ಪೂಣಾಹುತಿಯೊಂದಿಗೆ ಕೊನೆಗೊಂಡಿತು.
