ಉದಯವಾಹಿನಿ, ಬೆಂಗಳೂರು: ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿರುವ ೧೫೩ ಎಕರೆ ನೀಲಗಿರಿ ನೆಡುತೋಪು ಪ್ರದೇಶದಲ್ಲಿ ದಿವ್ಯೌಷಧೀಯ ಸಸ್ಯವನ, ಪಕ್ಷಿಲೋಕ, ಕಿರು ಮೃಗಾಲಯ, ವೃಕ್ಷೋದ್ಯಾನ, ಮತ್ತು ಜೈವಿಕ ವನ ನಿರ್ಮಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.ಸುರಿಯುವ ಮಳೆಯ ನಡುವೆಯೂ ಮಾದಪ್ಪನಹಳ್ಳಿ ನೆಡುತೋಪಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅರಣ್ಯ ಸಚಿವರು, ಬೆಂಗಳೂರು ಉತ್ತರ ಭಾಗದಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಯಾವುದೇ ಸಸ್ಯೋದ್ಯಾನವಿಲ್ಲ ಹೀಗಾಗಿ ಇಲ್ಲಿ ಅರಣ್ಯ ಭೂಮಿಯಲ್ಲಿ ಇಂದಿರಾಗಾಂಧೀ ಜೈವಿಕ ಉದ್ಯಾನ, ವಿಶ್ವಗುರು ಬಸವಣ್ಣ ದಿವ್ಯೌಷಧೀಯ ಸಸ್ಯ ವನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪಕ್ಷಿ ಲೋಕ, ನಾಡಪ್ರಭು ಕೆಂಪೇಗೌಡ ಕಿರು ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದರು. ಈ ಪ್ರದೇಶದಲ್ಲಿ ನೆಡಲಾಗಿರುವ ನೀಲಗಿರಿ ಮರಗಳನ್ನು ತೆಗೆದು ಅಲ್ಲಿ ಸ್ಥಳೀಯ ಜಾತಿಯ ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವವೇ ಮೊದಲಾದ ನೂರಾರು ಪ್ರಭೇದದ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಹೀಗೆ ಬೆಳೆಸುವ ಎಲ್ಲ ಮರಗಳ ಬಳಿ ವೃಕ್ಷದ ಹೆಸರು, ಪ್ರಭೇದ ಇತ್ಯಾದಿ ವೈಜ್ಞಾನಿಕ ವಿವರದ ಫಲಕ ಹಾಕುವ ಮೂಲಕ ಮುಂದಿನ ಪೀಳಿಗೆ ಕನಿಷ್ಠ ೫೦ ಮರಗಳನ್ನು ಗುರುತಿಸುವಂತೆ ಜ್ಞಾನ ಸಿಂಚನ ಮಾಡಲು ಕ್ರಮ ವಹಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಅತ್ಯಗತ್ಯವಾದ ಶ್ವಾಸ ತಾಣ: ಬೆಂಗಳೂರು ನಗರ ವ್ಯಾಪಕವಾಗಿ ಬೆಳೆದಿದೆ ಮತ್ತು ಬೆಳೆಯುತ್ತಿದೆ. ಆದರೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ನಂತಹ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ನಿರ್ಮಾಣವೇ ಆಗಲಿಲ್ಲ. ಹೀಗಾಗಿ ಉದ್ಯಾನ ನಗರಿ ಬೆಂಗಳೂರಿನ ಖ್ಯಾತಿಯನ್ನು ಉಳಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಯಲಹಂಕ ಸುತ್ತಮುತ್ತ ನೂರಾರು ವಸತಿ ಬಡಾವಣೆಗಳಿದ್ದು, ಬಿಡಿಎ ಸಹ ೨೫ ಸಾವಿರ ನಿವೇಶನಗಳ ಡಾ.ಶಿವರಾಮಕಾರಂತ ಬಡಾವಣೆ ಅಭಿವೃದ್ಧಿ ಪಡಿಸುತ್ತಿದೆ. ಜೊತೆಗೆ ಇಲ್ಲಿ ೫-೬ ಸಾವಿರ ಮನೆಗಳು ಈಗಾಗಲೇ ಇವೆ. ಭವಿಷ್ಯದಲ್ಲಿ ೨ ಲಕ್ಷ ಜನರು ವಾಸಿಸುವ ಈ ಪ್ರದೇಶದಲ್ಲಿ ಇಂದಿರಾಗಾಂಧೀ ಜೈವಿಕ ಉದ್ಯಾನ, ಗಿಡಮೂಲಿಕೆಗಳ ದಿವ್ಯೌಷಧ ವನ, ವೃಕ್ಷೋಧ್ಯಾನ ಮತ್ತು ಕಿರು ಮೃಗಾಲಯ ಸ್ಥಾಪಿಸುವುದರಿಂದ ಜನಾಕರ್ಷಣೆಯ ಕೇಂದ್ರವೂ ಆಗುತ್ತದೆ ಜೊತೆಗೆ ಬೆಂಗಳೂರಿನ ಈ ಭಾಗದ ಜನರಿಗೆ ಅತ್ಯುತ್ತಮ ಶ್ವಾಸತಾಣ (ಲಂಗ್ಸ್ ಸ್ಪೇಸ್) ಲಭಿಸಿದಂತಾಗುತ್ತದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.

 

Leave a Reply

Your email address will not be published. Required fields are marked *

error: Content is protected !!