ಉದಯವಾಹಿನಿ, ಬೆಂಗಳೂರು: ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಗರದ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನದ ಆವರಣದಲ್ಲಿರುವ ಹುತಾತ್ಮರ ಉದ್ಯಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು.ಕಳೆದ ಸೆ.೧ ರಿಂದ ಆ.೩೧ರ ನಡುವಿನ ಒಂದು ವರ್ಷದ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು ೨೧೬ ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದು, ಈ ಪೈಕಿ ರಾಜ್ಯದಲ್ಲಿ ೧೨ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಗೃಹ ಸಚಿವ ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅತೀಕ್ ಎಲ್.ಕೆ., ಗೃಹ ಕಾರ್ಯದರ್ಶಿ ಉಮಾಶಂಕರ್ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಪುಷ್ಪ ನಮನ ಸಲ್ಲಿಸಿದರು.
ರಾಜ್ಯದಲ್ಲಿ ಬೆಂಗಳೂರು ಕೆಎಸ್‌ಆರ್‌ಪಿ ಮೂರನೇ ಪಡೆ ಸಹಾಯಕ ಕಮಾಂಡೆಂಟ್ ಪ್ರಭಾಕರ್, ರಾಯಚೂರು ಜಿಲ್ಲೆ ಎಎಸ್‌ಐ ಜಗದೀಶ್, ತುಮಕೂರು ಜಿಲ್ಲೆ ಎಎಸ್‌ಐ ವೆಂಕಟೇಶ್, ಬೆಂಗಳೂರು ಜಿಲ್ಲೆಯ ಸಿಎಚ್‌ಸಿಗಳಾದ ದಾದಾವಲ್ಲಿ, ಹನುಮಂತರಾಜ್, ಬೆಂಗಳೂರು ನಗರ ಸಿಎಚ್‌ಸಿಗಳಾದ ಶ್ರೀನಿವಾಸ್, ಪೀರ್ ಖಾನ್, ಬೀದರ್ ಜಿಲ್ಲೆಯ ಸಿಎಚ್‌ಸಿಗಳಾದ ವಿಜಯಕುಮಾರ್, ಸಂಜೀವ್‌ಕುಮಾರ್, ವಿಜಯನಗರ ಐಆರ್‌ಬಿ ಸ್ಪೆಷಲ್ ಆರ್‌ಎಚ್‌ಸಿ ವಿಠ್ಠಲ್ ವೈ.ಗಡದ್ದಾರ್, ಕೆ.ಎಸ್.ಐ.ಎಸ್.ಎಫ್ ಮೂರನೇ ಪಡೆಯ ಪಿಸಿ ರುದ್ರಪ್ಪ ಸಿದ್ದಣ್ಣನವರ್ ಮತ್ತು ತುಮಕೂರು ಜಿಲ್ಲೆಯ ಮಹೇಶ್ ಹುತಾತ್ಮರಾಗಿದ್ದಾರೆ.
