ಉದಯವಾಹಿನಿ, ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆಶ್ವೀಜ ಮಾಸದ ಪೌರ್ಣಿಮೆಯ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತಿದೆ. ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲು ಮುಚ್ಚುವುದು ಪ್ರತೀತಿ.ಇದೀಗ ಆಶ್ವೀಜ ಪೌರ್ಣಿಮೆಯ ನಂತರ ಬರುವ ಮೊದಲ ಗುರುವಾರ (ಅ.24 ರಂದು ದೇಗುಲದ ಬಾಗಿಲು ತೆರೆದು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಭರದ ಸಿದ್ಧತೆಗಳು ಸಾಗಿವೆ. ಬಲಿಪಾಡ್ಯಮಿ ಮಾರನೇ ದಿನವಾದ ನವೆಂಬರ್ 3 ರಂದು ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಹಾಸನಾಂಬ ಉತ್ಸವಕ್ಕೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿ ಹಾಸನಾಂಬ ವೆಬ್‌ಸೈಟ್ ಸಹ ಆರಂಭಿಸಲಾಗಿದೆ.
ಹಾಸನಾಂಬ ಉತ್ಸವ ಸಂದರ್ಭದಲ್ಲಿ ಅಧಿಕಾರಿಗಳು ಹೇಗೆ ಕೆಲಸ ನಿರ್ವಹಿಸಬೇಕು ಎಂಬುದರ ಕುರಿತು ಈಗಾಗಲೇ ಹಲವು ಸಭೆ, ಕಾರ್ಯಾಗಾರಗಳನ್ನು ನಡೆಸಿ, ಸೂಚನೆ ನೀಡಲಾಗಿದೆ. ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಲು ಹಾಗೂ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ವಹಿಸಿರುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚನೆ ನೀಡಿದ್ದಾರೆ.ಹಿಂದಿನ ವರ್ಷದ ವಿಡಿಯೋ ತುಣುಕು ವೀಕ್ಷಣೆ ಮಾಡಿ, ಆಗಿರುವ ಸಣ್ಣ ಪುಟ್ಟ ಲೋಪದೋಷ ಸರಿಪಡಿಸಿಕೊಳ್ಳಲಾಗಿದೆ. ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ಧಗಂಗಾ ಮಠದ ಸ್ವಾಮೀಜಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ವರ್ಷ 9 ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಬರುವ ನಿರೀಕ್ಷೆ ಮಾಡಲಾಗಿದೆ.ಅಂತಿಮ ಹಂತದಲ್ಲಿ ಸಿದ್ಧತೆ: ನಗರದಾದ್ಯಂತ ಅಲಂಕಾರದ ಕಾರ್ಯಗಳು ಭರದಿಂದ ನಡೆಯುತ್ತಿವೆ.
