ಉದಯವಾಹಿನಿ, ಚಿಕ್ಕಮಗಳೂರು: ಮಾನವ- ಕಾಡಾನೆ ಸಂಘರ್ಷ ತಡೆಯಲು ಮತ್ತೊಂದು ಆನೆ ಶಿಬಿರ ತಲೆ ಎತ್ತಲಿದ್ದು, ಬಾಳೆಹೊನ್ನೂರು- ಕಳಸ ನಡುವಿನ ತನೂಡಿ ಸಮೀಪ ಜಾಗ ಅಂತಿಮಗೊಳಿಸಿದೆ.
ಬಂಡೀಪುರ, ಶಿವಮೊಗ್ಗದ ಸಕ್ರೆಬೈಲು, ಕೊಡಗಿನ ದುಬಾರೆಯಲ್ಲಿ ಆನೆ ಶಿಬಿರಗಳಿವೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳು ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಉಟಪಳ ನೀಡುವ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಈಗ ದೂರದ ಆನೆ ಬಿಡಾರಗಳಿಂದ ಸಾಕಾನೆಗಳನ್ನು ಕರೆಸಬೇಕಿದೆ.
ಮೂಡಿಗೆರೆ ಮತ್ತು ಆಲ್ದೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಸಾಕಾನೆಗಳ ನೆರವು ಬೇಕಿದ್ದರೆ ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ ಆನೆ ಶಿಬಿರಗಳನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜಿಲ್ಲೆಯಲ್ಲೇ ಆನೆ ಬಿಡಾರ ತೆರೆಯಲು ಸರ್ಕಾರ ಚಿಂತಿಸಿದೆ. ಆನೆ ಬಿಡಾರಕ್ಕೆ ಸ್ಥಳ ಗುರುತಿಸುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಚಿಕ್ಕಮಗಳೂರು ಅರಣ್ಯ ವೃತ್ತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಅದರಂತೆ ತಜ್ಞರ ತಂಡ ರಚಿಸಲಾಗಿತ್ತು. ಆ ತಂಡ ಎಂಟು ಸ್ಥಳಗಳನ್ನು ಗುರುತು ಮಾಡಿತ್ತು. ಅವುಗಳಲ್ಲಿ ಪ್ರಮುಖ ಮೂರು ಸ್ಥಳಗಳನ್ನು ತಂಡ ಶಿಫಾರಸು ಮಾಡಿತ್ತು. ಬಾಳೆಹೊನ್ನೂರು, ಮುತ್ತೋಡಿ ಅರಣ್ಯದಲ್ಲಿ ಎರಡು ಕಡೆ ಆನೆ ಶಿಬಿರಕ್ಕೆ ಸೂಕ್ತವಾದ ಜಾಗ ಇದೆ ಎಂದು ಗುರುತಿಸಿತ್ತು.
ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ತಜ್ಞರ ತಂಡವು ಸೆಪ್ಟೆಂಬರ್‌ನಲ್ಲಿ ಮೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಾಳೆಹೊನ್ನೂರು ಸಮೀಪದ ಹಲಸೂರು ಅರಣ್ಯ ವಿಭಾಗದ ತನೂಡಿ ಬಳಿಯ ಜಾಗ ಸೂಕ್ತವಾಗಿದೆ ಎಂದು ನಿರ್ಧರಿಸಿದೆ.
ನೀರು ನಿರಂತರವಾಗಿ ಹರಿಯುವ ಸ್ಥಳ ಆಗಿರಬೇಕು, ಆನೆಗಳಿಗೆ ಆಹಾರ ಹತ್ತಿರದಲ್ಲಿ ಸಿಗುವಂತಿರಬೇಕು. ಲಾರಿಗಳ ಸಂಚಾರಕ್ಕೆ ಅನುಕೂಲ ಇರಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡ ಸ್ಥಳ ಇದು ಎಂದು ಗುರುತಿಸಲಾಗಿದೆ. ತಜ್ಞರ ತಂಡ ಕೂಡ ಇದೇ ಜಾಗಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಆನೆ ಶಿಬಿರ ಸ್ಥಾಪನೆಗೆ ಬೇಕಿರುವ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆಯಾದರೆ ಜಿಲ್ಲೆಯಲ್ಲಿ ಆನೆ ಶಿಬಿರವೊಂದು ಶೀಘ್ರವೇ ತಲೆ ಎತ್ತಲಿದೆ.
