ಉದಯವಾಹಿನಿ, ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಇಂದು ಸಂಜೆಯೊಳ ಗಾಗಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದ್ದು, ಇದರ ನಡುವೆ ಕಾಂಗ್ರೆಸ್ನ ರಣತಂತ್ರಗಾರಿಕೆ ಬಗ್ಗೆ ಹಲವು ಅನುಮಾನಗಳು ಕೇಳಿಬಂದಿವೆ.
ಈಗಾಗಲೇ ಅಳೆದೂ ತೂಗಿ ಸಾಕಷ್ಟು ತಯಾರಿಗಳ ಜೊತೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಕ್ಕೆ ಎರಡು ಹೆಸರನ್ನು ಅಖೈರುಗೊಳಿಸಿದ್ದು, ಸಂಡೂರಿಗೆ ಒಂದು ಹೆಸರನ್ನು ರವಾನಿಸಲಾಗಿದೆ. ಇ.ತುಕಾರಾಂ ಅವರಿಂದ ತೆರವಾಗಿರುವ ಸಂಡೂರು ಕ್ಷೇತ್ರಕ್ಕೆ ಅವರ ಪತ್ನಿ ಅನ್ನಪೂರ್ಣ ಅವರು ಅಭ್ಯರ್ಥಿಯಾಗಲಿದ್ದಾರೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.ಉಳಿದಂತೆ ಚನ್ನಪಟ್ಟಣ ಕ್ಷೇತ್ರ ಎನ್ಡಿಎ ಮಿತ್ರಕೂಟಕ್ಕಷ್ಟೇ ಅಲ್ಲದೆ ಕಾಂಗ್ರೆಸ್ಗೂ ಇಬ್ಬಂದಿತನವನ್ನು ತಂದಿಟ್ಟಿದೆ. ಸ್ಥಳೀಯ ನಾಯಕರು, ಮುಖಂಡರು ಮಾಜಿ ಸಂಸದ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಬೇಕು ಎಂಬ ಒತ್ತಡ ಹೇರುತ್ತಿದ್ದಾರೆ.ಈಗಾಗಲೇ ಸಂಡೂರಿಗೆ ತುಕಾರಾಂ ಅವರ ಪತ್ನಿಗೆ ಟಿಕೆಟ್ ನೀಡುವ ನಿರ್ಧಾರದ ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ.
ಚನ್ನಪಟ್ಟಣಕ್ಕೂ ಡಿ.ಕೆ.ಶಿವಕುಮಾರ್ರವರ ಸಹೋದರ ಡಿ.ಕೆ.ಸುರೇಶ್ರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಮತ್ತಷ್ಟು ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಅಳುಕು ಪಕ್ಷದಲ್ಲಿದೆ. ಹೀಗಾಗಿ ರಘುನಂದರಾಮಣ್ಣ, ಮಾಜಿ ಶಾಸಕ ಅಶ್ವತ್ ಮತ್ತು ಪುಟ್ಟಣ್ಣ ಅವರ ಹೆಸರುಗಳು ಚರ್ಚೆಯಲ್ಲಿವೆ. ಬಹುತೇಕ ರಘುನಂದರಾಮಣ್ಣ ಅಥವಾ ಡಿ.ಕೆ.ಸುರೇಶ್ ಅವರ ಪೈಕಿ ಒಬ್ಬರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಇದರ ನಡುವೆ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಈಗಲೂ ಚಾಲ್ತಿಯಲ್ಲಿದೆ.
