ಉದಯವಾಹಿನಿ,ಬೆಂಗಳೂರು: ಜಾತಿ ಜನಗಣತಿ ಎಂದು ಪರಿಗಣಿಸಲಾಗುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಮೀಕ್ಷಾ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂಬ ವದಂತಿಯ ನಡುವೆ ಪರ ವಿರೋಧದ ಚರ್ಚೆಗಳು ಮತ್ತೆ ಭುಗಿಲೆದ್ದಿವೆ.
ಸಚಿವ ಈಶ್ವರ ಖಂಡ್ರೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿ, ಈ ಹಿಂದೆ ಕಾಂತರಾಜು ಅವರು ನಡೆಸಿದ ಸಮೀಕ್ಷೆಯಲ್ಲಿ ಏನು ಅಂಶಗಳಿವೆ ಎಂದು ಗೊತ್ತಿಲ್ಲ. ಜಯಪ್ರಕಾಶ್‌ ಹೆಗಡೆಯವರು ವರದಿಯನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜಾತಿ ಜನಗಣತಿಗೆ ಯಾರ ವಿರೋಧವೂ ಇಲ್ಲ. ಅದರಲ್ಲಿ ರಾಜಕೀಯ ಮಾಡುವುದು ಬೇಡ. ವೈಜ್ಞಾನಿಕ ತನಿಖೆಯಾಗಲಿ ಎಂಬುದು ಲಿಂಗಾಯತ ಸಮುದಾಯದ ಅಭಿಪ್ರಾಯ ಎಂದರು. ರಾಷ್ಟ್ರಮಟ್ಟದಲ್ಲಿ 2011 ರಲ್ಲಿ ಜನಗಣತಿ ನಡೆದಿದ್ದು ಬಿಟ್ಟರೆ ಈವರೆಗೂ ಸಮೀಕ್ಷಾ ಕಾರ್ಯವಾಗಿಲ್ಲ. ಜನಗಣತಿಯ ಜೊತೆಯಲ್ಲೇ ಜಾತಿ ಜನಗಣತಿ ನಡೆಯಬೇಕು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ. ಆಗ ಯಾವ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ ಎಂದರು.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೇವೆ. ಅವರೂ ಭವರಸೆಯನ್ನು ನೀಡಿದ್ದಾರೆ. ವರದಿಯನ್ನು ಬಹಿರಂಗಪಡಿಸಬೇಕೇ? ಬೇಡವೇ ಎಂಬುದು ನಂತರದ ವಿಚಾರ. ಮೊದಲು ಸಂಪುಟದಲ್ಲಿ ಮಂಡನೆಯಾಗಲಿ. ಈಗಾಗಲೇ 10 ವರ್ಷ ವಿಳಂಬವಾಗಿದೆ ಎಂದರು.ಒಂದು ಸಮುದಾಯ ಜನಸಂಖ್ಯಾ ವರದಿಯಲ್ಲಿ ಕ್ಷೀಣವಾಗುತ್ತಿದ್ದರೆ ಸಹಜವಾಗಿ ಅನುಮಾನ ಬರುತ್ತದೆ. ಇದರ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು ಎಂದು ಹೇಳಿದರು.ಮತ್ತೊಂದೆಡೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿಯವರು ಮಾತನಾಡಿ, ಸಂಪುಟದಲ್ಲಿ ವರದಿ ಮಂಡನೆಯಾಗದ ಹೊರತು ಚರ್ಚೆ ಮಾಡುವುದು ಅನಗತ್ಯ. ವರದಿಯಲ್ಲಿರುವ ಮಾಹಿತಿಗಳೇನು ಎಂಬುದು ಯಾರಿಗೂ ಗೊತ್ತಿಲ್ಲ. ಲಿಂಗಾಯತ ಸಮುದಾಯದ ವಿರೋಧ, ಮತ್ತಿನ್ಯಾವುದೋ ಸಮುದಾಯ ಪರ ಎಂಬ ಚರ್ಚೆಗಳು ಸರಿಯಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!