ಉದಯವಾಹಿನಿ, ಚಿಕ್ಕಬಳ್ಳಾಪುರ: ಸರ್ಕಾರವು ಈ ಬಾರಿ ಬರಗಾಲದ ಕಾರಣ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬರಗಾಲದಲ್ಲಿಯೂ ಬಿಸಿಯೂಟ ನೀಡಿತ್ತು. ವಿದ್ಯಾರ್ಥಿಗಳು ರಜೆ ಇದ್ದರೂ ಬಿಸಿಯೂಟಕ್ಕಾಗಿ ಶಾಲೆಗೆ ಬರುತ್ತಿದ್ದರು.
ಹೀಗೆ ಬರದಲ್ಲಿಯೂ ಬಿಸಿಯೂಟವನ್ನು ತಯಾರಿಸಿದ ಸಿಬ್ಬಂದಿಗೆ ಮಾತ್ರ ಇಲ್ಲಿಯವರೆಗೂ ಆ ಎರಡು ತಿಂಗಳ ಗೌರವಧನವನ್ನು ಸರ್ಕಾರ ಪಾವತಿಸಿಲ್ಲ.
ಏಪ್ರಿಲ್ ಮತ್ತು ಮೇ ತಿಂಗಳ ಗೌರವಧನ ಈ ಬಾರಿ ಬರುತ್ತದೆ ಮುಂದಿನ ಬಾರಿ ಬರುತ್ತದೆ ಎಂದು ಪ್ರತಿ ತಿಂಗಳೂ ಜಿಲ್ಲೆಯ ಬಿಸಿಯೂಟ ಸಿಬ್ಬಂದಿ ಕಾಯುತ್ತಲೇ ಇದ್ದಾರೆ. ಆದರೆ ಹಣ ಮಾತ್ರ ಬಿಡುಗಡೆಯೇ ಆಗಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಖ್ಯ ಅಡುಗೆಯವರು ಹಾಗೂ ಅಡುಗೆ ಸಹಾಯಕರು ಸೇರಿ ಒಟ್ಟು 2,690 ಸಿಬ್ಬಂದಿ ಇದ್ದಾರೆ. ಈ ಪರಿಶಿಷ್ಟ ಜಾತಿಗೆ ಸೇರಿದ 189 ಮಂದಿ ಮುಖ್ಯ ಅಡುಗೆ ಸಿಬ್ಬಂದಿ, 252 ಸಹಾಯಕ ಅಡುಗೆ ಸಿಬ್ಬಂದಿ, ಪರಿಶಿಷ್ಟ ಪಂಗಡದ 228 ಮುಖ್ಯ ಅಡುಗೆ ಸಿಬ್ಬಂದಿ, 231 ಸಹಾಯಕ ಅಡುಗೆ ಸಿಬ್ಬಂದಿ, ಹಿಂದುಳಿದ ವರ್ಗಗಳಿಗೆ ಸೇರಿದ 1,161 ಮುಖ್ಯ ಅಡುಗೆ ಸಿಬ್ಬಂದಿ, 629 ಸಹಾಯಕ ಅಡುಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮುಖ್ಯ ಅಡುಗೆ ಸಿಬ್ಬಂದಿಗೆ ಸರ್ಕಾರವು ಮಾಸಿಕ ₹ 3,700 ಮತ್ತು ಸಹಾಯಕ ಸಿಬ್ಬಂದಿಗೆ ₹ 3,600 ಗೌರವಧನ ನೀಡುತ್ತದೆ.

ಬಿಸಿಯೂಟ ಸಿಬ್ಬಂದಿಯಾಗಿ ಆರ್ಥಿಕವಾಗಿ ಹಿಂದುಳಿದವರು, ವಿಧವೆಯರು, ಬದುಕು ನಡೆಸಲು ಕಷ್ಟ ಎನ್ನುವವರು ಪ್ರಮುಖವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವನ ನಿರ್ವಹಣೆಗೆ ಮುಖ್ಯ ಆಧಾರವೇ ವೇತನ. ಆದರೆ ಇಂತಹ ಅಶಕ್ತರು, ದುರ್ಬಲರು ಮತ್ತು ಆರ್ಥಿಕ ಹಿಂದುಳಿದವರಿಗೆ ಬರಗಾಲದಲ್ಲಿ ಬಿಸಿಯೂಟ ತಯಾರಿಸಿದ ಗೌರವಧನ ಇಂದಿಗೂ ಪಾವತಿ ಆಗಿಲ್ಲ. ಬೇಸಿಗೆ ಮುಗಿದು ದಸರಾ ರಜೆಯೇ ಪೂರ್ಣವಾಗಿದೆ.

Leave a Reply

Your email address will not be published. Required fields are marked *

error: Content is protected !!