ಉದಯವಾಹಿನಿ, ಬ್ರಹ್ಮಾವರ: ರಾಸಾಯನಿಕ ಗೊಬ್ಬರಗಳನ್ನು ಕೃಷಿಯಲ್ಲಿ ಅತಿಯಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೃಷಿಕ ಸಮಾಜ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಕೋಟದ ಜನತಾ ಫಿಶ್ ಮೀಲ್ ಮತ್ತು ಆಯಿಲ್ ಪ್ರಾಡಕ್ಟ್ಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಕೃಷಿಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಕ್ಷೇತ್ರ ಗಂಭೀರ ರೀತಿಯಲ್ಲಿ ಬಿಗಡಾಯಿಸುತ್ತಿದ್ದು, ಮುಂದೊಂದು ದಿನ ತುತ್ತು ಅನ್ನಕ್ಕೂ ಸಮಸ್ಯೆ ತಂದೊಡ್ಡಲಿದೆ. ಆದ್ದರಿಂದ ಕೃಷಿಗೆ ಪ್ರಾಧಾನ್ಯತೆ ನೀಡಿ ರೈತರನ್ನು ಉತ್ತೇಜಿಸುವ ಕಾರ್ಯ ತುರ್ತು ಆಗಬೇಕಾಗಿದೆ. ಕೃಷಿ ಕ್ಷೇತ್ರ ಮತ್ತು ಕೃಷಿಕರು ಪ್ರಾಕೃತಿಕ ಸಮಸ್ಯೆ, ಮಾರುಕಟ್ಟೆ ಸಮಸ್ಯೆ, ಕಾರ್ಮಿಕರ ಸಮಸ್ಯೆ ಮುಂತಾದ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ರೈತರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕೋಟದ ಜನತಾ ಫಿಶ್ ಮೀಲ್‌ ಮತ್ತು ಆಯಿಲ್ ಪ್ರಾಡಕ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಆನಂದ ಸಿ. ಕುಂದರ್ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಕೃಷಿ, ಪರಿಸರ ಸಂರಕ್ಷಣೆ ಬಗ್ಗೆ ಪಾಠ ಇರಬೇಕು. ಇದರಿಂದ ಮಾತ್ರ ಮಕ್ಕಳಿಗೆ ಕೃಷಿ ಬಗ್ಗೆ ಅರಿವು ಮೂಡುತ್ತದೆ. ಜನಪ್ರತಿನಿಧಿಗಳು, ಸರ್ಕಾರ ಈ ಬಗ್ಗೆ ಚಿಂತನೆ ಮಾಡುವುದು ಅಗತ್ಯ ಎಂದರು.

Leave a Reply

Your email address will not be published. Required fields are marked *

error: Content is protected !!