ಉದಯವಾಹಿನಿ, ಮುಂಡರಗಿ: ‘ಮಹಿಳೆಯರು ಕುಟುಂಬದ ಜೀವನಾಡಿಯಾಗಿದ್ದಾರೆ. ಅವರಿಗೆ ಇರುವಷ್ಟು ಜೀವನಾನುಭವ ಹಾಗೂ ಕುಟುಂಬ ಪ್ರೀತಿ ಅನ್ಯರಲ್ಲಿ ಇರುವುದಿಲ್ಲ. ಈ ಕಾರಣದಿಂದ ಮಹಿಳೆಯರ ಸಾಹಿತ್ಯ ಸಶಕ್ತವಾಗಿರುತ್ತದೆ’ ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಗದ್ಗರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಗ್ರಾಮಾಭಿವೃದ್ಧಿ ಹಾಗೂ ಶೈಕ್ಷಣಿಕ ತರಬೇತಿ ಸಂಸ್ಥೆಯ 15ನೇ ವಾರ್ಷಿಕೋತ್ಸವ ಹಾಗೂ ವೀಣಾ ಪಾಟೀಲ ಅವರು ರಚಿಸಿರುವ ‘ಮನುಕುಲ ತಿಲಕರು’ ಮತ್ತು ‘ಅಸ್ಮಿತೆಯ ಅನುಭಾವ’ ಗ್ರಂಥಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿವಿಧ ಪ್ರಕಾರದ ಬರವಣಿಗೆಗಳ ಮೂಲಕ ಈಗಾಗಲೇ ಓದುಗ ಬಳಗದಲ್ಲಿ ಗುರುತಿಸಿಕೊಂಡಿರುವ ವೀಣಾ ಪಾಟೀಲ ಅವರು ಪ್ರಬುದ್ಧ ಬರಹಗಾರ್ತಿಯಾಗಿದ್ದು, ಅವರ ಲೇಖನಗಳು ಜನಮನ್ನಣೆ ಗಳಿಸಿವೆ. ಅವರಿಂದ ಇನ್ನೂ ಹಲವು ಗ್ರಂಥಗಳು ಹೊರಬರುವಂತಾಗಲಿ ಎಂದು ಆಶಿಸಿದರು.
ಕವಿ ಡಾ.ವಿ.ಕೆ. ಸಂಕನಗೌಡ್ರ ಮಾತನಾಡಿ, ‘ಬರಹದಲ್ಲಿ ಏಕತಾನತೆ ಇದ್ದರೆ ಓದುಗರಿಗೆ ಬಹುಬೇಗ ಬೇಸರವಾಗುತ್ತದೆ. ಆದರೆ ವೀಣಾ ಪಾಟೀಲರ ಬರಹಗಳು ವೈವಿಧ್ಯತೆಯಿಂದ ಕೂಡಿದ್ದು, ಓದುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಸತತ ಅಧ್ಯಯನದಿಂದ ಮಾತ್ರ ಬರಹ ಗಟ್ಟಿಗೊಳ್ಳುತ್ತದೆ ಎನ್ನುವುದಕ್ಕೆ ವೀಣಾ ಅವರ ಗ್ರಂಥಗಳು ಸಾಕ್ಷಿಯಾಗಿವೆ’ ಎಂದು ತಿಳಿಸಿದರು.
