ಉದಯವಾಹಿನಿ, ಕವಿತಾಳ: ಗ್ರಾಮಸ್ಥರ ಪ್ರೀತಿ, ಕಾಳಜಿಗೆ ಮನಸೋತ ರಾಷ್ಟ್ರಪಕ್ಷಿ ಊರಲ್ಲಿಯೇ ಗರಿಗೆದರಿ ಕುಣಿಯುವ ಮೂಲಕ ಹಳ್ಳಿಗರಲ್ಲಿ ತಾನೂ ಒಂದಾಗಿ ಬೆರೆತ ಅಪರೂಪದ ದೃಶ್ಯ ಸಿರವಾರ ತಾಲ್ಲೂಕಿನ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ನಿತ್ಯ ಕಂಡು ಬರುತ್ತದೆ. ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ನವಿಲುಗಳು ಹೊಲಗಳಿಗೆ ಹೋಗಿ ಬೆಳೆ ತಿನ್ನುವುದು ಅಲ್ಲಿ ಮೈ ಮರೆತು ಗರಿ ಬಿಚ್ಚಿ ಕುಣಿಯುವುದು ಸಾಮಾನ್ಯ. ಮನುಷ್ಯರ ಸುಳಿವು ಕಂಡಲ್ಲಿ ಹೆದರಿ ಓಡಿ ಹೋಗುತ್ತವೆ ಆದರೆ ಈ ನವಿಲಣ್ಣ ಹಳ್ಳಿಯಲ್ಲಿ ಸಾರ್ವಜನಿಕರ ಎದುರಿನಲ್ಲಿಯೇ ನರ್ತಿಸಿ ಅಚ್ಚರಿ ಮೂಡಿಸುತ್ತದೆ.
ಮರಿಯಾಗಿದ್ದಾಗಲೇ ಆಕಸ್ಮಿಕವಾಗಿ ಊರಿಗೆ ಬಂದ ನವಿಲಿಗೆ ನಾಯಿ, ಬೆಕ್ಕು ಮತ್ತು ಸಣ್ಣ ಮಕ್ಕಳು ಕಿರಿಕಿರಿ ಮಾಡುವುದನ್ನು ಕಂಡ ಗ್ರಾಮದ ಗುರುಪಾದಪ್ಪ ನಾಯಕ ಕೆಲವು ದಿನಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಅದಕ್ಕೆ ತಿನ್ನಲು ಜೋಳ, ಅಕ್ಕಿ ಕೊಟ್ಟು ನೀರು ಹಾಕಿದ್ದಾರೆ, ನಂತರ ಕಾಡಿಗೆ ತೆರಳಿದರೂ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಗ್ರಾಮಕ್ಕೆ ಆಗಮಿಸುವ ಅದು ಜನರಿಗೆ ಹೆದರದೆ ತನ್ನಿಷ್ಟದಂತೆ ಕುಣಿದು ಸ್ವತಂತ್ರವಾಗಿ ಓಡಾಡುತ್ತದೆ.
