ಉದಯವಾಹಿನಿ, ಚಿಂತಾಮಣಿ: ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಕಳ್ಳತನ ಪ್ರಕರಣ ನಾಗರಿಕರನ್ನು ಬೆಚ್ಚಿಬೀಳಿಸಿದೆ. ನಗರದ ಸೊಣ್ಣಶೆಟ್ಟಹಳ್ಳಿ ರಸ್ತೆ ಮುಂದೆ ವ್ಯಕ್ತಿಯೊಬ್ಬರು ಕಾರನ್ನು ನಿಲ್ಲಿಸಿದ್ದರು. ಅವರು ಬ್ಯಾಂಕ್‌ನಲ್ಲಿ ₹5 ಲಕ್ಷ ಡ್ರಾ ಮಾಡಿಕೊಂಡು ಕಾರಿನಲ್ಲಿ ಇಟ್ಟಿದ್ದರು.
ದೇವರ ದರ್ಶನ ಮಾಡಿಕೊಂಡು ಹೊರಗಡೆ ಬರುವಷ್ಟರಲ್ಲಿ ಕಳ್ಳರು ಕಾರಿನ ಗ್ಲಾಸ್ ಒಡೆದು ಹಣ ಎಗರಿಸಿ ಪರಾರಿಯಾಗಿದ್ದರು.
ನಗರದ ಕೋಲಾರ ರಸ್ತೆಯ ಹೋಟೆಲ್ ಒಂದರ ಮುಂದೆ ವ್ಯಾಪಾರಿಯೊಬ್ಬರು ಕಾರು ನಿಲ್ಲಿಸಿ ಊಟಕ್ಕೆ ಹೋಗಿದ್ದರು. ಕಾರಿನಲ್ಲಿ ₹3 ಲಕ್ಷ ಇಟ್ಟಿದ್ದರು. ಹೋಟೆಲ್‌ನಿಂದ ಹೊರಬಂದಾಗ ಆಘಾತ ಕಾದಿತ್ತು. ಕಳ್ಳರು ಕಾರಿನಲ್ಲಿದ್ದ ಹಣ ದೋಚಿದ್ದರು.
ಪೊಲೀಸರು ಎರಡು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಬೇಧಿಸಲು ಸಹಕಾರಿಯಾಗಿದ್ದು ಕಾರಿನ ಕ್ಯಾಮೆರಾಗಳಲ್ಲಿ ದೊರೆತಿದ್ದ ಫೂಟೇಜ್‌ಗಳು. ಈ ಪ್ರಕರಣಗಳು ಸಿ.ಸಿ ಕ್ಯಾಮೆರಾದ ಮಹತ್ವದ ಕುರಿತು ಜಾಗೃತಿ ಮೂಡಿಸಿವೆ.
ನಗರದಲ್ಲಿ ನಡೆಯುವ ಕಳ್ಳತನ, ಕೊಲೆ, ದರೋಡೆ ಮೊದಲಾದ ಅಪರಾಧ ಪ್ರಕರಣ ಪತ್ತೆ ಹಚ್ಚಲು ಅತ್ಯಾಧುನಿಕ ಸಿ.ಸಿ ಟಿವಿ ಕ್ಯಾಮೆರಾಗಳು ಪೊಲೀಸರಿಗೆ ಸಹಕಾರಿಯಾಗುತ್ತವೆ. ವಾಹನ ಸವಾರರ ಸುಗಮ ಸಂಚಾರಕ್ಕೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟ್ರಾಫಿಕ್ ಸಿಗ್ನಲ್ ನೆರವಾಗುತ್ತವೆ. ಈ ಎರಡು ಸೌಲಭ್ಯದ ಕೊರತೆ ಕಾಡುತ್ತಿವೆ. ನಗರದ ಪ್ರಮುಖ ವೃತ್ತಗಳಲ್ಲಿ 54 ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳಲ್ಲಿ ಕೆಲವು ಕೆಟ್ಟುನಿಂತಿವೆ. 3 ವರ್ಷದ ಹಿಂದೆ ಅಳವಡಿಸಿರುವ ಕ್ಯಾಮೆರಾಗಳ ತಂತ್ರಜ್ಞಾನ ಹಳೆಯದಾಗಿದೆ.

Leave a Reply

Your email address will not be published. Required fields are marked *

error: Content is protected !!