ಉದಯವಾಹಿನಿ, ಆಲೂರು: ಸಹೋದರಿ ಹಾಸನಾಂಬೆ ದೇವಿ ಜಾತ್ರೆ ಮುಗಿದ ನಂತರ, ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿರುವ ಕೆಂಚಾಂಬಿಕೆ ದೇವಿ ಜಾತ್ರೆ ನ. 5 ಮತ್ತು 6ರಂದು ನೆರವೇರಲಿದೆ. ನ. 5ರಂದು ಹರಿಹಳ್ಳಿ ಮೂಲ ದೇವಸ್ಥಾನದಲ್ಲಿ ರಾತ್ರಿ ಸಪ್ತಮಾತೃಕಾ ಅಲಂಕಾರ, ಉದ್ವಾರ್ಚನೆ ಸುಗ್ಗಿ ನಡೆಯುತ್ತದೆ.ಸಂಜೆಯಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿ 8 ಗಂಟೆಗೆ ಮಹಾ ಮಂಗಳಾರತಿ ನಡೆಯುತ್ತದೆ. ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ನ. 6 ರಂದು ಬೆಳಿಗ್ಗೆ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿ, ಬೆಳ್ಳಿ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಕೆಂಚಾಂಬ ದೇವಾಲಯಕ್ಕೆ ತರಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ, ತೆಂಗಿನಕಾಯಿ ಈಡುಗಾಯಿ ಹಾಕುವುದು ವಿಶೇಷ.
ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ತೊಡಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಲಾಗುತ್ತದೆ. ದೇವಸ್ಥಾನದ ಸುತ್ತ ಬಲಿ ಅನ್ನ ಹಾಕುತ್ತಾರೆ. ಸನಿಹದಲ್ಲಿದ್ದ ವೀರಭದ್ರ ಉತ್ಸವ ಮೂರ್ತಿಯನ್ನು ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ ಹೋಗಿ ಕರೆತಂದು, ಕೆಂಡೋತ್ಸವ ನಡೆಸುತ್ತಾರೆ. ನಂತರ ಸಾರ್ವಜನಿಕರು ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ ಒಂದು ಗಂಟೆಯವರೆಗೆ ಅವಕಾಶವಿದೆ.
