
ಉದಯವಾಹಿನಿ ಶಿವಮೊಗ್ಗ: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ಶಾಲಾ ಮುಖ್ಯಸ್ಥನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದು ಬಂದಿದೆ. ಇಂತಹ ಕೀಚಕ ಕೃತ್ಯ ನಡೆಸಿದಂತ ಶಾಲಾ ಮುಖ್ಯಸ್ಥನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿರುವಂತ ಘಟನೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಈ ಹಿಂದೆಯೂ ಶಾಲೆಯಲ್ಲಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಸಾಗರದ ವನಶ್ರೀ ವಸತಿ ವಿದ್ಯಾಲಯದ ಮುಖ್ಯಸ್ಥ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಇಂದು ಮತ್ತೊಂದು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಕೇಸ್ ಹಾಗೂ ಅಟ್ರಾಸಿಟಿ ಪ್ರಕರಣ ಕೂಡ ದಾಖಲಾಗಿದೆ.ಇಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದಂತ ಬೆಂಗಳೂರು ಮೂಲದ ವಿದ್ಯಾರ್ಥಿನಿ ಹಾಗೂ ಪೋಷಕರು ಕಳೆದ ನಾಲ್ಕು ತಿಂಗಳಿನಿಂದ ವನಶ್ರೀ ವಸತಿ ವಿದ್ಯಾಲಯದ ಮುಖ್ಯಸ್ಥ ಮಂಜಪ್ಪ ಅವರು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.ಈ ಪ್ರಕರಣದ ಬಳಿಕ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್, ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ವನಶ್ರೀ ವಸತಿ ವಿದ್ಯಾಲಯಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಪೋಕ್ಸೋ ಕೇಸ್ ದಾಖಲಾದ ಬಳಿಕ ಆರೋಪಿ ವನಶ್ರೀ ಮಂಜಪ್ಪ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಸಾಗರ ಗ್ರಾಮಂತರ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.
