ಉದಯವಾಹಿನಿ, ಬೆಂಗಳೂರು: ಮಕ್ಕಳು ಕನಸನ್ನು ಕಾಣಬೇಕು. ಆ ಕನಸನ್ನು ಸಾಕಾರಗೊಳಿಸಲು ಶ್ರಮ ಪಡಬೇಕು, ಜೀವನದಲ್ಲಿ ತ್ಯಾಗ ಹಾಗೂ ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕುಳಿತಲ್ಲಿಯೇ ಕುಳಿತು ಕನಸು ಕಂಡರೆ ಪ್ರಯೋಜನವಿಲ್ಲ, ಅದಕ್ಕೆ ಪ್ರಯತ್ನ ಪಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡಿದರು.
“ನೀವು ಸಾಗಿದ ಹಾದಿಯನ್ನು ಮರೆತರೆ ಫಲ ದೊರೆಯುವುದಿಲ್ಲ. ನಿಮ್ಮನ್ನು ಸಾಕಿದ ಪೋಷಕರು, ವ್ಯಕ್ತಿತ್ವ ಬೆಳೆಸಿದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಯಾವುದನ್ನು ಬೇಕಾದರೂ ಬದಲಿಯಾಗಿ ಪಡೆಯಬಹುದು. ಪೋಷಕರು ಮತ್ತು ಶಿಕ್ಷಕರನ್ನು ಬದಲಿಯಾಗಿ ಪಡೆಯಲು ಸಾಧ್ಯವಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದರೂ ನೀವು ಈ ಪ್ರಾಥಮಿಕ ವಿಚಾರಗಳನ್ನು ಮರೆಯಬಾರದು” ಎಂದು ಹೇಳಿದರು.
“ಮಕ್ಕಳೇ ಈ ದೇಶದ ಆಸ್ತಿ. ನೀವು ಸಹ ಮುಂದಿನ ದಿನಗಳಲ್ಲಿ ವಿಧಾನಸೌಧದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುವ, ಅತ್ಯುನ್ನತ ಅಧಿಕಾರಿಗಳಾಗಿ, ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರೀತಿ ಬೆಳೆಯಬೇಕು ಎಂಬುದು ನಮ್ಮ ಆಶಯ” ಎಂದರು.
ಸಾಧನೆಗೆ, ಆಕಾಶಕ್ಕೆ ಮಿತಿಯಿಲ್ಲ: “ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಯಾರು ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು. ಸಾಧನೆಗೆ ಹಾಗೂ ಆಕಾಶಕ್ಕೆ ಮಿತಿ ಇಲ್ಲ. ಜಾಗತಿಕವಾದ ಸ್ಪರ್ಧಾತ್ಮಕ ಯುಗದಲ್ಲಿ ನೀವಿದ್ದೀರಿ. ಅಧ್ಯಾಪಕರು ಯಾವುದಾದರು ಹೊಸ ಮಾಹಿತಿ ಕೊಡುವುದನ್ನು ಮರೆಯಬಹುದು ಎಂದರು.
“ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಅನೇಕ ವಿಚಾರಗಳಲ್ಲಿ ಸಾಕಷ್ಟು ಮಂದಿದ್ದೇವೆ. ಶಿಕ್ಷಣ, ಆರೋಗ್ಯ, ಆಡಳಿತದಲ್ಲಿ ಸಾಕಷ್ಟು ಪ್ರಗತಿ ಸಾದಿಸಿದ್ದೇವೆ. ಮಂಗಳಯಾನ ಚಂದ್ರಯಾನಕ್ಕೆ ಇಸ್ರೋ ಸಂಸ್ಥೆಯವರು ಬೆಂಗಳೂರಲ್ಲಿ ಉಪಗ್ರಹಗಳನ್ನು ತಯಾರು ಮಾಡುತ್ತಾರೆ. ದೇಶದಲ್ಲಿ ಅತ್ಯಂತ ಹೆಚ್ಚು ವೈದ್ಯರು, ಶುಶ್ರೂಷಕಿಯರು, ಇಂಜಿನಿಯರ್ ಗಳು, ವಿಜ್ಞಾನಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ.
