ಉದಯವಾಹಿನಿ,ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ಚಳಿಗಾಲದ ಅನುಭವ ಜನರಿಗಾಗುತ್ತಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಸಾಕಷ್ಟು ತಂಪನೆಯ ವಾತಾವರಣ ಇತ್ತು. ಆದರೂ, ಜೋರು ಮಳೆಯಾಗುತ್ತಿಲ್ಲ. ಇದೇ ವಾತಾವರಣವು ಇಂದು ಮುಂದುವರೆದಿದೆ.
ಮೋಡ ಮುಚ್ಚಿದ್ದು, ೮ ಗಂಟೆ ಬಳಿಕ ನಗರದ ವಿವಿಧ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದೆ. ಮೆಜೆಸ್ಟಿಕ್, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ಬಸವನಗುಡಿ, ಶ್ರೀನಗರ, ಮೈಸೂರು ರಸ್ತೆ, ಬನಶಂಕರಿ, ಜೆಪಿ ನಗರ, ಪುಟ್ಟೆನಹಳ್ಳಿ, ಹಲಸೂರು, ಆರ್‌ಟಿ ನಗರ, ಹೆಬ್ಬಾಳ, ವಿಮಾನ ನಿಲ್ದಾಣ ರಸ್ತೆ, ಯಶವಂತಪುರ, ಪೀಣ್ಯ, ತುಮಕೂರು ರಸ್ತೆ, ವಿಜಯನಗರ, ರಾಜಾಜಿನಗರ ಸುತ್ತಮುತ್ತ ಹನಿ ಮಳೆಯಾಗುತ್ತಿದೆ.
ಮತ್ತೊಂದೆಡೆ, ಕಚೇರಿಗೆ ಹೊರಟವರಿಗೆ ಕಿಟಿಕಿಟಿ ಕಳೆದ ವಾರ ಸಂಜೆ ಬಳಿಕ ಹಿಡಿದಿದ್ದ ಮಳೆ ಈ ವಾರ ಬೆಳಿಗ್ಗೆಯೇ ಆರಂಭವಾಗುತ್ತಿದೆ. ಈ ಜಿಟಿಜಿಟಿ ಮಳೆಯಿಂದ ಕಚೇರಿಗೆ ಹೊರಡುವವರಿಗೆ ಒಂದಿಷ್ಟು ಸಮಸ್ಯೆ ಉಂಟಾಯಿತು.
ವಾಹನ ಸವಾರರು ಮಳೆ ಜೋರಾದಾಗ ರಸ್ತೆ ಪಕ್ಕದಲ್ಲಿ ನಿಲ್ಲುವುದು, ಕಡಿಮೆಯಾದಾಗ ಮುಂದೆ ಸಾಗುವುವ ದೃಶ್ಯ ಸಾಮಾನ್ಯವಾಗಿತ್ತು.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ ೪೮ ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ೨೭ ಮತ್ತು ೨೧ ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎಂದು ಹವಮಾ ಇಲಾಖೆ ಮಾಹಿತಿ ನೀಡಿದೆ.

ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ನೈಋತ್ಯ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವಿದೆ. ಈ ಕಾರಣಕ್ಕೆ ಉಂಟಾಗಿರುವ ವಾಯು ಚಂಡಮಾರುತದ ಪರಿಚಲನೆ ಈಗ ಉತ್ತರ ತಮಿಳುನಾಡಿನ ನೈಋತ್ಯ ಬಂಗಾಳ ಕೊಲ್ಲಿಯಲ್ಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ ೦.೯ ಕಿಲೋ ಮೀಟರ್ ಎತ್ತರದಲ್ಲಿದೆ. ಈ ಕಾರಣಕ್ಕೆ ಮತ್ತೆ ಹಿಂಗಾರು ಮಳೆ ಸ್ವಲ್ಪ ಚುರುಕಾಗಿದ್ದು, ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಳೆ ಬೀಳುತ್ತಿದೆ.

Leave a Reply

Your email address will not be published. Required fields are marked *

error: Content is protected !!