ಉದಯವಾಹಿನಿ, ಹುಳಿಯಾರು: ಹೋಬಳಿ ವ್ಯಾಪ್ತಿಯ ದಸೂಡಿ, ಗಾಣಧಾಳು, ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಿದೆ. ಕುರಿರೊಪ್ಪ ಹಾಗೂ ಮನೆ ಹಿಂದೆ, ಮುಂದೆ ಕಟ್ಟಿ ಹಾಕಿರುವ ದನಕರುಗಳ ಮೇಲೆ ದಾಳಿ ನಡೆಸುತ್ತಿವೆ.
ಬೆಂಚಿಹಟ್ಟಿ ಸಮೀಪದ ಕುರಿರೊಪ್ಪಕ್ಕೆ ನುಗ್ಗಿದ ಚಿರತೆ ಕುರಿ ಹಿಡಿಯಲು ಮುಂದಾಗಿದೆ.
ಇದೇ ವೇಳೆ ಬೆದರಿದ ಕುರಿ ಹಿಂಡು ಕಂಡು ರೊಪ್ಪದಲ್ಲಿಯೇ ಮಲಗಿದ್ದ ಕುರಿಗಾಹಿಗಳು ಚೀರಾಡಿದ್ದಾರೆ. ಕೂಡಲೇ ಕುರಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಚೀರಾಟಕ್ಕೆ ಬೆದರಿದ ಚಿರತೆ ರೊಪ್ಪದ ಪಕ್ಕದಲ್ಲಿಯೇ ಇದ್ದ ಕುರಿಗಳನ್ನು ಕೂಡಲು ಮಾಡಿದ್ದ ಬಲೆಯ ಗೂಡಿಗೆ ಬಿದ್ದಿದೆ. ಬಲೆಯ ಗೂಡಿನ ಬಾಗಿಲು ಭದ್ರಪಡಿಸಲು ಹೋದ ಕುರಿಗಾಹಿಯೊಬ್ಬರ ಮುಖ ಹಾಗೂ ಕೈಗಳಿಗೆ ಪರಚಿ ಗಾಯಗೊಳಿಸಿದೆ.

ಹತ್ತಿರದಲ್ಲಿಯೇ ಇದ್ದ ಅರಣ್ಯ ಇಲಾಖೆಯ ಬೋನು ತಂದು ಹಿಡಿಯಲು ಹೋಗಲು ಮುಂದಾಗುವಷ್ಟರಲ್ಲಿ ಜಿಗಿದು ಪರಾರಿಯಾಗಿದೆ. ವಾರದ ಹಿಂದೆ ರಂಗನಕೆರೆ ಗ್ರಾಮದಲ್ಲಿ ಮನೆ ಮುಂದೆ ಕಟ್ಟಿದ್ದ ನಾಯಿಯನ್ನು ಹೊತ್ತೊಯ್ದಿತ್ತು. ಅಲ್ಲದೆ ಕುರಿಹಟ್ಟಿ ಅರಣ್ಯ ಪ್ರದೇಶದಲ್ಲಿ ಕುರಿಯನ್ನು ಹೊತ್ತೊಯ್ದು ತಿಂದು ಹಾಕಿತ್ತು. ಮತ್ತೆ ಮತ್ತೆ ಪ್ರಕರಣಗಳು ಸಂಭವಿಸುತ್ತಲೇ ಇದ್ದು ಅರಣ್ಯ ಇಲಾಖೆಯವರು ಇತ್ತ ಗಮನಹರಿಸುವಂತೆ ಜನರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!