ಉದಯವಾಹಿನಿ, ಬೆಂಗಳೂರು : ವೆಂಗಯ್ಯನ ಕೆರೆ ಒತ್ತುವರಿ ಸಂಬಂಧ ಕೂಡಲೇ ಕೆರೆ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯದಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ಆರ್ ಪುರಂ ವ್ಯಾಪ್ತಿಯ ವೆಂಗಯ್ಯನ ಕೆರೆಯನ್ನು ೮ ಕೋಟಿ ರೂ. ವೆಚ್ಚದಲ್ಲಿ ಕೆರೆಯ ಅಂಗಳದಲ್ಲಿ ಹೂಳೆತ್ತುವ ಕಾರ್ಯ, ಫೆನ್ಸಿಂಗ್ ಅಳವಡಿಸುವ, ಬಂಡ್ ಬಲಪಡಿಸುವ, ವಾಯು ವಿಹಾರ ಮಾರ್ಗ, ಇನ್ ಲೆಟ್ ದುರಸ್ತಿ ಕಾರ್ಯ, ಡೈವರ್ಷನ್ ಲೈನ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೆರೆಗೆ ಸೀವೇಜ್ ನೀರು ಬರದಂತೆ ಜಲಮಂಡಳಿ ವತಿಯಿಂದ ಈಗಾಗಲೇ ೧೦ ಎಂ.ಎಲ್.ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಇದೀಗ ಪಾಲಿಕೆ ವತಿಯಿಂದ ೧೫ ಎಂ.ಎಲ್.ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ ಮಾಹಿತಿ ನೀಡಿದರು.
ವಲಯ ಆಯುಕ್ತ ರಮೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
